ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಜು.31ಕ್ಕೆ ವಿಚಾರಣೆ ಮುಂದೂಡಿಕೆ
Update: 2025-07-19 22:18 IST
ಪ್ರವೀಣ್ ಚೌಗಲೆ
ಉಡುಪಿ, ಜು.19: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಮೂರು ಸಾಕ್ಷಿಗಳ ಪಾಟಿ ಸವಾಲಿಗೆ ದಿನಾಂಕ ನಿಗದಿಪಡಿಸಲು ಮುಂದಿನ ವಿಚಾರಣೆಯನ್ನು ಜು.31ಕ್ಕೆ ಮುಂದೂಡಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಆದೇಶಿಸಿದೆ.
ನ್ಯಾಯಧೀಶ ಸಮೀವುಲ್ಲಾ ಅವರ ಪೀಠದಲ್ಲಿ ನಡೆದ ಕಲಾಪದಲ್ಲಿ ಆರೋಪಿ ಪರ ಹಿಂದಿನ ವಕೀಲರಲ್ಲಿದ್ದ ದಾಖಲೆಗಳನ್ನು ನೂತನವಾಗಿ ನೇಮಕ ಮಾಡಲಾದ ವಕೀಲ ರಾಜು ಪೂಜಾರಿ ಅವರಿಗೆ ಹಸ್ತಾಂತರಿಸ ಲಾಯಿತು. ಸಾವಿರಾರು ಪುಟಗಳ ದಾಖಲೆಗಳನ್ನು ಪರಿಶೀಲನೆ ನಡೆಸಲು ಸಮಯ ಅವಕಾಶ ಬೇಕೆಂಬ ವಕೀಲರ ರಾಜು ಪೂಜಾರಿ ಮನವಿ ಮೇರೆಗೆ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವಾ ಹಾಜರಿದ್ದರು.