×
Ad

ಪಿಎಂ ಸೂರ್ಯ ಘರ್ ಯೋಜನೆ ಉಡುಪಿ ಜಿಲ್ಲೆಗೆ 6.2 ಕೋಟಿ ರೂ. ಬಿಡುಗಡೆ

Update: 2025-08-29 21:39 IST

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 6 ಕೋಟಿ 2 ಲಕ್ಷ ರೂ.ಗಳನ್ನು 773 ಫಲಾನುಭವಿಗಳ ಖಾತೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್‌ನಲ್ಲಿ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಸೂರ್ಯ ಘರ್ ಯೋಜನೆಯ ಜಾರಿಯನ್ನು ಪರಿಶೀಲಿಸಿದ ಕೋಟ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಈ ಯೋಜನೆಯ ಪ್ರಯೋಜನಗಳನ್ನು ಪ್ರತಿ ಮನೆಗೆ ತಲುಪಿಸಬೇಕೆಂದು ಮನವಿ ಮಾಡಿದರು.

ಈಗಾಗಲೇ ಜಿಲ್ಲೆಯಲ್ಲಿ ಸೂರ್ಯ ಘರ್ ಯೋಜನೆಗೆ 5,270 ಅರ್ಜಿಗಳು ಬಂದಿದ್ದು, 1,155 ಮನೆಗಳಿಗೆ ವೆಂಡರ್ ಆಯ್ಕೆಯನ್ನು ಮಾಡಲಾಗಿದೆ. ಇವುಗಳಲ್ಲಿ 803 ಮನೆಗಳಿಗೆ ಸೋಲಾರ್ ಅಳವಡಿಕೆ ಮಾಡಲಾಗಿದ್ದು, ಅಳವಡಿಕೆ ಮಾಡಲಾದ 773 ಫಲಾನುಭವಿಗಳಿಗೆ ಒಟ್ಟು 6 ಕೋಟಿ 2 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರತಿ ಫಲಾನುಭವಿಗೆ 78,000 ಸಬ್ಸಿಡಿ ಮೊತ್ತದ ಪ್ರಯೋಜನ ಸಿಗಲಿದೆ ಎಂದು ಕೋಟ ತಿಳಿಸಿದರು.

ಸಭೆಯಲ್ಲಿ ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಮುಖ್ಯ ಯೋಜನಾಧಿಕಾರಿ ಉದಯ್‌ಕುಮಾರ್ ಶೆಟ್ಟಿ, ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ದಿನೇಶ್ ಉಪಾಧ್ಯಾಯ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರಾದ ನಿತಿನ್ ಸಾಲಿಯಾನ್ ಹಾಗೂ ಕೋಟತಟ್ಟು, ಉಪ್ಪೂರು, ನಿಟ್ಟೆ, ಕಿರಿಮಂಜೇಶ್ವರ, ಮಜೂರು ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News