×
Ad

ಉಡುಪಿ ಜಿಲ್ಲೆಯ ಶೇ.68.93 ಆಧಾರ್ ಕಾರ್ಡ್‌ಗೆ ಮಾತ್ರ ಮೊಬೈಲ್ ನೊಂದಣಿ: ಡಿಸಿ ಸ್ವರೂಪ ಟಿ.ಕೆ.

Update: 2025-07-17 20:04 IST

ಉಡುಪಿ: ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ನೋಂದಾಯಿಸಿ ಕೊಳ್ಳುವುದು ಕಡ್ಡಾಯವಾಗಿದೆ. ಈವರೆಗೆ ಶೇ.68.93ರಷ್ಟು ಆಧಾರ್‌ಗೆ ಮೊಬೈಲ್ ಸಂಖ್ಯೆ ನೊಂದಣಿಯಾಗಿದ್ದು, ಬಾಕಿ ಉಳಿದವರೂ ಶೀಘ್ರವೇ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಅಪ್‌ಡೆಟ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪ್ರತಿಯೊಬ್ಬರು ತಪ್ಪದೇ ಆಧಾರ್ ಲಿಂಕ್ ಮಾಡಿಸಿಕೊಳ್ಳಿ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಈವರೆಗೆ 14,11,209 ಮಂದಿ ಆಧಾರ್ ಕಾರ್ಡ್‌ನ್ನು ಹೊಂದಿದ್ದು, ಇವರಲ್ಲಿ 13,42,275 ಮಂದಿ ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ (ಶೇ.68.93) ನೋಂದಾಯಿಸಿಕೊಂಡಿದ್ದಾರೆ. ಬಾಕಿ ಉಳಿದ ಎಲ್ಲರೂ ತಮ್ಮ ಆಧಾರ್‌ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಶೀಘ್ರದಲ್ಲೇ ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಬೆರಳಚ್ಚು ನೀಡಿ: ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವ 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಆಧಾರ್ ಸೆಂಟರ್‌ಗಳಿಗೆ ತೆರಳಿ ತಮ್ಮ ಬೆರಳಚ್ಚು ನೀಡಿ, ಆಧಾರ್ ಕಾರ್ಡ್‌ಗಳನ್ನು ಸಕ್ರೀಯ ಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಧಾರ್ ನಿಷ್ಕೃಿಯಗೊಳ್ಳಲಿದೆ. ಪ್ರಸ್ತುತ 41,115 ಯುವಜನರು ಬಯೋಮೆಟ್ರಿಕ್ ನೀಡುವುದು ಬಾಕಿ ಇದೆ. ಇದರಿಂದ ಭವಿಷ್ಯದಲ್ಲಿ ಅವರು ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಬಯೋಮೆಟ್ರಿಕ್ ನೀಡಿ, ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಟ್ರ್ಯಾಕರ್‌ಗೆ 45,832 ಮಕ್ಕಳು ದಾಖಲಾಗಿದ್ದು,ಇವರಲ್ಲಿ 33,425 ಮಕ್ಕಳು ಆಧಾರ್‌ಕಾರ್ಡ್ ಹೊಂದಿದ್ದಾರೆ. ಬಾಕಿ ಉಳಿದ 11,947 ಮಕ್ಕಳೂ ಆಧಾರ್ ಕಾರ್ಡ್ ಹೊಂದುವುದು ಅಗತ್ಯ ವಾಗಿದ್ದು, ತಮ್ಮ ಹತ್ತಿರದ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮಾಡಿ ಕೊಳ್ಳಲು ಅವಕಾಶವಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ನೋಂದಣಿಯನ್ನು ಇಲ್ಲಿ ಮಾಡಿಸಬೇಕು ಎಂದರು.

ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಬಗ್ಗೆ ಮಾಹಿತಿ ಯನ್ನು ಪರಿಶೀಲಿಸಲು ಇಚ್ಛಿಸಿದ್ದಲ್ಲಿ ಪ್ಲೇಸ್ಟೋರ್‌ನಲ್ಲಿ ‘M-Aadhar App’ ಡೌನ್‌ಲೋಡ್ ಮಾಡಿಕೊಂಡು ನೋಡಬಹುದು. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಸ್ವರೂಪ ಟಿ.ಕೆ. ಹೇಳಿದರು.

ಕಾನೂನು ಕ್ರಮಕ್ಕೆ ಸೂಚನೆ: ಹೊರರಾಜ್ಯ ಹಾಗೂ ದೇಶಗಳಿಂದ ಬಂದಿರುವ ಜನರು ಸುಳ್ಳು ದಾಖಲೆ ಪತ್ರ ಗಳನ್ನು ನೀಡಿ ಆಧಾರ್ ನೋಂದಣಿಗೆ ಮುಂದಾಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರ ವಹಿಸಬೇಕು. ಕೆಲವರು ನಕಲಿ ಆಧಾರ್ ಪ್ರತಿಗಳನ್ನು ಹೊಂದಿರುವ ಬಗ್ಗೆ ಕ್ಯೂಆರ್ ಕೋಡ್ ಅನ್ನು ಪರಿಶೀಲಿಸುವ ಮೂಲಕ ಆಧಾರ್ ಕಾರ್ಡ್‌ನ ನೈಜತೆಯನ್ನು ಪರಿಶೀಲಿಸಬೇಕು. ಒಂದು ವೇಳೆ ಸುಳ್ಳು ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಪಡೆದಿರುವುದು ಅಥವಾ ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿರುವುದು ಪತ್ತೆಯಾದಲ್ಲಿ ಅಂತಹವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜನನ ಪ್ರಮಾಣ ಪತ್ರ ಹಾಗೂ ಶಾಲೆಯ ದಾಖಲೆಗಳಲ್ಲಿ ಹೆಸರು ಬದಲಾವಣೆಗೆ ಕೆಲವು ವಿದ್ಯಾರ್ಥಿಗಳಿಗೆ, ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರು ಹಾಗೂ ಹಾಸಿಗೆ ಹಿಡಿದ ಕೆಲವು ಅಂಗವಿಕರುಗಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಸಮಸ್ಯೆ ಉಂಟಾಗುತ್ತಿದೆ. ಇವುಗಳನ್ನು ಕೂಡಲೇ ಬಗೆಹರಿಸಿ ಅವರಿಗೂ ಸಹ ಆಧಾರ್ ಕಾರ್ಡ್ ಪಡೆಯಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಯುಐಡಿಎಐ ಉಪನಿರ್ದೇಶಕ ಗುಲ್ಷನ್‌ಕುಮಾರ್ ಸಿಂಗ್, ಅಸಿಸ್ಟೆಂಟ್ ಮ್ಯಾನೇಜರ್ ಮೊಹಮ್ಮದ್ ಮೂಸಾಬ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಡಿಡಿಪಿಐ ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿ ಉಪಸ್ಥಿತರಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News