ಉಡುಪಿ ಮಹಾ ನಗರಪಾಲಿಕೆ ಮೇಲ್ದರ್ಜೆಗೇರಿಕೆ ಪ್ರಸ್ತಾಪ : ಕೆಮ್ಮಣ್ಣು ಗ್ರಾಪಂ ವಿರೋಧ, 8 ಗ್ರಾಪಂಗಳಿಂದ ಒಪ್ಪಿಗೆ
ಉಡುಪಿ, ಫೆ.25: ಉಡುಪಿ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಸಂಬಂಧಿಸಿ, ಹೊಸದಾಗಿ ಸೇರ್ಪಡೆಗೊಳ್ಳಲಿ ರುವ ಗ್ರಾಪಂಗಳ ಪೈಕಿ ಕೆಮ್ಮಣ್ಣು ಹೊರತು ಪಡಿಸಿದ್ದು, ಉಳಿದ ಎಂಟು ಗ್ರಾಪಂಗಳು ಸೇರ್ಪಡೆಗೊಳ್ಳಲು ಒಪ್ಪಿಗೆ ಸೂಚಿಸಿವೆ.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಮಂಗಳ ವಾರ ನಡೆದ ಸಾಮಾನ್ಯಸಭೆಯಲ್ಲಿ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಈ ಕುರಿತು ಮಾಹಿತಿ ನೀಡಿದರು.
ಮಹಾನಗರಪಾಲಿಕೆಯ ವ್ಯಾಪ್ತಿಗೆ ನಗರಸಭೆ ಸುತ್ತಮುತ್ತಲಿನ ಉದ್ಯಾವರ, ಅಲೆವೂರು, 80 ಬಡಗಬೆಟ್ಟು, ಕಡೆಕಾರು, ಕಲ್ಯಾಣಪುರ, ತೆಂಕನಿಡಿಯೂರು, ಬಡಾ ನಿಡಿಯೂರು, ಕೆಮ್ಮಣ್ಣು ಹಾಗೂ ಅಂಬಲಪಾಡಿ ಗ್ರಾಪಂಗಳು ಸೆರ್ಪಡೆಯಾ ಗಲಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗ್ರಾಮಸಭೆಯನ್ನು ಆಯೋಜಿಸಿ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಕೆಮ್ಮಣ್ಣು ಗ್ರಾಪಂ ಮಾತ್ರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದರು.
ಈ ಬಗ್ಗೆ ನಿರ್ಣಯ ಮಾಡಿ ರಾಜ್ಯ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಕೆಮ್ಮಣ್ಣು ಗ್ರಾಪಂ ಹೊರತು ಪಡಿಸಿ ಉಳಿದ ಗ್ರಾಪಂ ಸೇರಿ ಒಟ್ಟು 3.80ಲಕ್ಷ ಜನಸಂಖ್ಯೆ ಇದ್ದು, ಇದರಿಂದ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆ ಗೇರಿಸಲು ಯಾವುದೇ ಸಮಸ್ಯೆ ಇಲ್ಲ. ಮಹಾನಗರಪಾಲಿಕೆಯಿಂದಾಗಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳಿಸಬಹುದು ಮತ್ತು ಹೆಚ್ಚುವರಿ ಅನುದಾನ ಬರಲಿದೆ ಎಂದು ಅವರು ತಿಳಿಸಿದರು.
ವಾರಾಹಿ ಯೋಜನೆ ಉದ್ಘಾಟನೆ: ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾ ಗಿದ್ದು, ಸದ್ಯ ಪ್ರತಿದಿನ 25 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತದೆ. ಅದೇ ರೀತಿ ಸ್ವರ್ಣದಿಂದ 25 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇಷ್ಟು ಪ್ರಮಾಣದಲ್ಲಿ ನೀರು ಪೂರೈಸುವಾಗ ದಿನದ 24ಗಂಟೆ ನೀರು ಒದಗಿಸುವ ಕಾರ್ಯ ಮಾಡಬೇಕು ಎಂದು ಸದಸ್ಯರು ಮನವಿ ಮಾಡಿದರು.
ಸದ್ಯ ವಾರಾಹಿ ನೀರನ್ನು ಪ್ರಾಯೋಗಿಕವಾಗಿ ಒದಗಿಸಲಾಗುತ್ತಿದೆ. 15 ದಿನಗಳ ಕಾಲ ಪರಿಶೀಲಿಸಿ ಈ ಬಗ್ಗೆ ಸಮಯ ನಿಗದಿಪಡಿಸಲಾಗುವುದು ಎಂದು ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದರು. ಮುಂದಿನ 15ದಿನಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳ್ಳುವುದರಿಂದ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಆದಷ್ಟು ಬೇಗ ಉದ್ಘಾಟಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ತೆರಿಗೆ ಪರಿಷ್ಕರಣೆಗೆ ವಿರೋಧ: ನಗರಸಭೆಯ 2025-26ನೇ ಸಾಲಿಗೆ ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡುವ ತೀರ್ಮಾನಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಪೌರಾಡಳಿತ ನಿರ್ದೇಶ ನಾಲಯದ ಸುತ್ತೋಲೆಯಂತೆ ಹಿಂದಿನ ಸಾಲಿನ ಮಾರ್ಗಸೂಚಿಸಿ ಬೆಲೆ ಎಂದು ಪರಿಗಣಿಸಿ 2024-25ರಲ್ಲಿ ನಿರ್ಧರಣೆಯಾದ ತೆರಿಗೆಯ ಮೇಲೆ ಶೇ.3ರಿಂದ 5ರವರೆಗೆ ತೆರಿಗೆ ಹೆಚ್ಚಳ ಮಾಡಲು ಸೂಚಿಸಲಾಗಿದೆ ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಪದೇ ಪದೇ ಜನರ ಮೇಲೆ ತೆರಿಗೆ ಹೊರೆ ಹಾಕುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಬಾರಿ ತೆರಿಗೆ ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿದರು.
ಸದಸ್ಯೆ ಸಮಿತ್ರಾ ಆರ್.ನಾಯಕ್ ಮಾತನಾಡಿ, ನಗರ ಪ್ರದೇಶ ಹೊರತು ಪಡಿಸಿ ಉಳಿದ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಆದುದರಿಂದ ಅಂತಹ ವಾರ್ಡ್‌ಗಳಿಗೆ ತ್ಯಾಜ್ಯ ನೀರು ಖಾಲಿ ಮಾಡುವ ಯಂತ್ರವನ್ನು ಶೇ.50ರಷ್ಟು ಕಡಿಮೆ ದರದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿದರು.
ವಸತಿ ಸಮಚ್ಛಯಗಳಿಂದ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುವ ಪ್ರವೃತಿ ಮುಂದುವರೆದಿದ್ದು, ಇವರಿಗೆ ನೋಟೀಸ್ ಜಾರಿ ಮಾಡಿದರೂ ಯಾವುದೇ ಪ್ರಯೋಜನ ಇಲ್ಲ ಎಂದು ಸದಸ್ಯರು ದೂರಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾ ಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.
ಜನನ ಹಾಗೂ ಮರಣ ಪ್ರಮಾಣ ಪತ್ರದ ಒಂದು ಪ್ರತಿಗೆ 10ರೂ.ನಿಂದ 50ರೂ.ಗೆ ಏರಿಕೆ ಮಾಡಿರುವ ಸದಸ್ಯರು ಆಕ್ಷೇಪ ವ್ಯಕ್ತಪಡಿಸಲಾಯಿತು. ಸರಕಾರದ ಸೂಚನೆಯಂತೆ ದರವನ್ನು ಏರಿಸಲಾಗಿದೆ ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
‘ಪಾರ್ಕಿಂಗ್ ಇಲ್ಲದ 58 ಕಟ್ಟಡಗಳಿಗೆ ನೋಟೀಸ್
ರಸ್ತೆ ಸುರಕ್ಷತಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳ ಮಾಹಿತಿಯನ್ನು ಕೇಳಿದ್ದಾರೆ. ಇದಕ್ಕೆ ಪೂರಕವಾಗಿ ನಗರಸಭೆಯಿಂದ ನಗರದ 58 ಕಟ್ಟಡಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ ಎಂದು ಪೌರಾಯುಕ್ತ ಡಾ.ಉದಯ ಶೆಟ್ಟಿ ತಿಳಿಸಿದರು.
ಈ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ, ನಗರದಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಹಾಗೂ ಸೆಟ್‌ಬ್ಯಾಕ್ ಬಿಡದ ಸಾಕಷ್ಟು ಕಟ್ಟಡಗಳು ಇವೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದರ ವಿರುದ್ಧ ಕ್ರಮ ಜರಗಿಸುವಂತೆ ತಿಳಿಸಿದರು.
‘ಮಾಂಡವಿ ಕಟ್ಟಡ ಕಾನೂನು ಬಾಹಿರ’
ನಗರದ ಕ್ಲಾಕ್ ಟವರ್ ಬಳಿ ನಿರ್ಮಿಸಲಾಗುತ್ತಿರುವ ಮಾಂಡವಿ ಕಟ್ಟಡ ಅಕ್ರಮವಾಗಿ ನಿರ್ಮಿಸಲಾಗಿದೆ. ಇಲ್ಲಿ ಯಾವುದೇ ಸೆಟ್‌ಬ್ಯಾಕ್ ಇಲ್ಲ ಎಂದು ಸದಸ್ಯ ಟಿ.ಜೆ.ಹೆಗ್ಡೆ ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ, ಇಲ್ಲಿ ಜನರು ನಡೆದುಕೊಂಡು ಹೋಗುವ ನಗರಸಭೆ ರಸ್ತೆಯನ್ನು ಕಟ್ಟಡ ಮಟ್ಟಕ್ಕೆ ಏರಿಸ ಲಾಗಿದೆ. ಆ ಮೂಲಕ ಕಾನೂನು ಬಾಹಿರವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಹುನ್ನಾರ ಮಾಡಲಾಗುತ್ತಿದೆ. ಅದನ್ನು ಪರಿಶೀಲಿಸಿ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಈ ಕಟ್ಟಡವನ್ನು ಪರಿಶೀಲನೆ ಮಾಡಿದ್ದು, ಇದರಲ್ಲಿ ಯಾವುದೇ ಉಲ್ಲಂಘನೆ ಕಂಡು ಬಂದಿಲ್ಲ ಎಂದು ತಿಳಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಟಿ.ಜೆ.ಹೆಗ್ಡೆ, ಇದನ್ನು ತರ್ಡ್ ಪಾರ್ಟಿ ಮೂಲಕ ಪರಿಶೀಲನೆ ಮಾಡಿಸಬೇಕು ಎಂದು ಒತ್ತಾಯಿಸಿದರು.