×
Ad

ಉಡುಪಿ ಮಹಾನಗರಪಾಲಿಕೆಯನ್ನಾಗಿಸುವ ಪ್ರಸ್ತಾವ| 9 ಗ್ರಾಪಂಗಳನ್ನು ತಾಪಂ, ಜಿಪಂ ಚುನಾವಣೆಯಲ್ಲಿ ಕೈಬಿಡಲು ಮನವಿ

Update: 2025-02-19 21:42 IST

ಉಡುಪಿ, ಫೆ.19: ಉಡುಪಿ ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಹಿನ್ನೆಲೆಯಲ್ಲಿ ಪಾಲಿಕೆಗೆ ಸೇರಿಸಲು ಉದ್ದೇಶಿಸಿರುವ 9 ಗ್ರಾಪಂಗಳನ್ನು ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಕೈಬಿಡುವಂತೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲಾಡಳಿತ ಮಹಾನಗರ ಪಾಲಿಕೆ ರಚನೆ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಅಂಕಿ ಸಂಖ್ಯೆಗಳ ಸಂಗ್ರಹಣೆ, ಜನಾಭಿಪ್ರಾಯ ಮತ್ತು ಸ್ಥಳೀಯ ಆಡಳಿತಗಳ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗಾಗಲೇ ಅವಧಿ ಪೂರ್ಣಗೊಂಡಿರುವ ತಾಪಂ ಮತ್ತು ಜಿಪಂ ಚುನಾವಣೆಗಳನ್ನು ಮುಂಬರುವ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಈ ಚುನಾವಣೆ ಘೋಷಣೆ ಸಂದರ್ಭದಲ್ಲಿ ಪ್ರಸ್ತುತ ಉದ್ದೇಶಿತ ಉಡುಪಿ ಮಹಾನಗರ ಪಾಲಿಕೆಗೆ ಸೇರಿಸಲು ಹೊರಟಿರುವ ಗ್ರಾಪಂಗಳನ್ನು ಕೈ ಬಿಡುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಉಡುಪಿ ನಗರಸಭೆಯ ಅವಧಿಯು ಇನ್ನು 8 ತಿಂಗಳುಗಳಲ್ಲಿ ಮುಕ್ತಾಯ ಗೊಳ್ಳಲಿದೆ. ಇದರಿಂದಾಗಿ ತಾಪಂ ಮತ್ತು ಜಿಪಂ ಚುನಾವಣೆಯ ಅನಗತ್ಯ ವೆಚ್ಚವನ್ನು ತಡೆಯಬಹುದಾಗಿದೆ. ಆದುದರಿಂದ ಉಡುಪಿ ತಾಲೂಕಿನ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ 9 ಗ್ರಾಪಂಗಳಾದ ಅಲೆವೂರು, ಉದ್ಯಾವರ, ಕಡೆಕಾರ್, ಅಂಬಲಪಾಡಿ, ತೆಂಕನಿಡಿಯೂರು, ಬಡಾ ನಿಡಿಯೂರು, ಕೆಮ್ಮಣ್ಣು, ಕಲ್ಯಾಣಪುರ, 80 ಬಡಗಬೆಟ್ಟು ಗ್ರಾಪಂಗಳ ವ್ಯಾಪ್ತಿಯನ್ನು ತಾಪಂ ಮತ್ತು ಜಿಪಂ ಚುನಾವಣೆಯ ಸಂದರ್ಭದಲ್ಲಿ ಹೊರತು ಪಡಿಸಿ ಚುನಾವಣೆ ನಡೆಸುವಂತೆ ಮನವಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News