ಫೆ.1ರಿಂದ ರಂಗಭೂಮಿ ಉಡುಪಿಯಿಂದ ‘ರಂಗಭೂಮಿ ರಂಗೋತ್ಸವ’
ಫೈಲ್ ಫೋಟೊ
ಉಡುಪಿ: ರಂಗಭೂಮಿ ಉಡುಪಿಯ ವತಿಯಿಂದ ‘ರಂಗಭೂಮಿ ರಂಗೋತ್ಸವ’ ಫೆ.1ರಿಂದ 3ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ. ಇದರಲ್ಲಿ ರಂಗಭೂಮಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಹಾಗೂ ಕೇರಳ ಜಾನಪದ ಉತ್ಸವವೂ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.1ರಂದು ಸಂಜೆ 5:45ಕ್ಕೆ ರಂಗೋತ್ಸವವನ್ನು ಮಣಿಪಾಲ ಮಾಹೆಯ ಸಹಕುಲಾಪತಿ ಹಾಗೂ ರಂಗಭೂಮಿಯ ಗೌರವಾಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಅದಾನಿ ಸಮೂಹದ ಅಧ್ಯಕ್ಷ ಕಿಶೋರ ಆಳ್ವ, ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ಹಾಗೂ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕಲ್ಕೂರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.
ಇದೇ ಸಂದರ್ಭ ರಂಗಭೂಮಿ ಉಡುಪಿಯಲ್ಲಿ ನಡೆಸಿದ 45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ. ಜೊತೆಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೆಂಗಳೂರಿನ ರಂಗರಥ ಟ್ರಸ್ಟ್ ತಂಡದ ‘ಧರ್ಮನಟಿ’ ನಾಟಕದ ಮರುಪ್ರದರ್ಶನ ನಡೆಯಲಿದೆ.
ಫೆ.2ರಂದು ಸಂಜೆ 6 ಗಂಟೆಗೆ ಖ್ಯಾತ ಮೂಳೆತಜ್ಞ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಡಾ.ಭಾಸ್ಕರನಾಂದ ಕುಮಾರ್‌ಗೆ 2025ನೇ ಸಾಲಿನ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರಿನ ಶಾರದಾ ಸಮೂಹ ಸಂಸ್ಥೆಗಳ ಡಾ.ಎಂ.ಬಿ. ಪುರಾಣಿಕ್, ಉಡುಪಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಮತ್ತಿತರರ ಉಪಸ್ಥಿತರಿರುವರು. ಬಳಿಕ ಬೆಂಗಳೂರು ರಂಗರಥ ಟ್ರಸ್ಟ್ ತಂಡದಿಂದ ‘ಇದ್ದಾಗ ನಿಮ್ದು ಕದ್ದಾಗ ನಿಮ್ದು’ ನಾಟಕ ಪ್ರದರ್ಶನಗೊಳ್ಳಲಿದೆ.
ಡಾ.ವೈ.ಎನ್.ಶೆಟ್ಟಿಗೆ ಜಾನಪದ ಪ್ರಶಸ್ತಿ: ಫೆ.3ರಂದು ನಡೆಯುವ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ಕೊಡ ಮಾಡುವ ‘ಜಾನಪದ ಪ್ರಶಸ್ತಿ’ಯನ್ನು ಹಿರಿಯ ಜಾನಪದ ವಿದ್ವಾಂಸ ಡಾ.ವೈ.ಎನ್.ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ಬಲ್ಲಾಳ್, ಅಂಬಲಪಾಡಿ ದೇವಸ್ಥಾನದ ಡಾ.ನಿ.ಬೀ. ವಿಜಯ ಬಲ್ಲಾಳ್, ಉಡುಪಿಯ ಕೇರಳ ಕಲ್ಬರಲ್ ಆಂಡ್ ಸೋಶಿಯಲ್ ಸೆಂಟರ್‌ನ ಅಧ್ಯಕ್ಷ ಸುಗುಣ ಕುಮಾರ್ ಹಾಗೂ ಕಾರ್ಯದರ್ಶಿ ಬಿನೇಶ್ ವಿ.ಸಿ. ಉಪಸ್ಥಿತರಿರುವರು.
ಜೊತೆಗೆ ಕೇರಳ ಜಾನಪದ ಉತ್ಸವವೂ ನಡೆಯಲಿದೆ ಎಂದು ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಉಪಾಧ್ಯಕ್ಷ ಭಾಸ್ಕರರಾವ್ ಕಿದಿಯೂರು, ಕಜಾಪ ಉಡುಪಿ ಕಾರ್ಯದರ್ಶಿ ರವಿರಾಜ್ ನಾಯಕ್, ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್‌ನ ಸುಗುಣ ಕುಮಾರ್ ಮತ್ತು ಬಿನೇಶ್ ವಿ.ಸಿ. ಉಪಸ್ಥಿತರಿದ್ದರು.
ಕೇರಳ ಜಾನಪದ ಉತ್ಸವ
ಫೆ.3ರಂದು ಸಂಜೆ 4:30ರಿಂದ ರಸಿಕರ್ ಕೇರಳ ಎಂಟರ್‌ಟೈನ್‌ಮೆಂಟ್ ತಂಡದಿಂದ ‘ಕೇರಳ ಜಾನಪದ ಉತ್ಸವ’ ನಡೆಯಲಿದೆ. ಖ್ಯಾತ ಕಲಾವಿದ ಕಲಾಭವನ್ ರಾಗೇಶ್ ನಿರ್ದೇಶನದಲ್ಲಿ ಕೇರಳದ ಜಾನಪದ ಕಲಾ ಪ್ರಕಾರ ಗಳಾದ ಕಳರಿಪಯಟ್ಟು, ವಡಿ ನೃತ್ಯಂ, ಆದಿವಾಸಿ ನೃತ್ಯ, ಕರಿಂಗಾಳಿಯಾಟ್ಟಂ, ಮುಡಿಯೆಟ್ಟು ಹಾಗೂ ಕೇರಳ ಕಲ್ಚರಲ್ ಆಂಡ್ ಸೋಶಿಯಲ್ ಸೆಂಟರ್‌ನ ಮಹಿಳಾ ಘಟಕದಿಂದ ‘ತಿರುವಾದಿರಕಳಿ’ ಪ್ರದರ್ಶನಗೊಳ್ಳಲಿದೆ.