×
Ad

ಶೇ.100 ಎಸೆಸೆಲ್ಸಿ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸೇರ್ಪಡೆ ಸರಿಯಲ್ಲ: ಗಂಟಿಹೊಳೆ

Update: 2025-06-17 19:51 IST

ಬೈಂದೂರು: ಕೆಲವೊಂದು ಶಿಕ್ಷಣ ಸಂಸ್ಥೆಗಳು ಪ್ರೌಢಶಾಲೆಗೆ ದಾಖಲು ಮಾಡಿಕೊಂಡ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಹಿಂದುಳಿದಿರುವ ಕಾರಣ ಮುಂದಿಟ್ಟು ಹಾಗೂ ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ದೂರಾಲೋಚನೆ ಇಟ್ಟುಕೊಂಡು ಹತ್ತನೇ ತರಗತಿಗೆ ಬೇರೆ ಖಾಸಗಿ ಶಾಲೆ ಗಳಿಗೆ ಅಥವಾ ಸರಕಾರಿ ಶಾಲೆಗಳಿಗೆ ದಾಖಲಾಗುವಂತೆ ಮಾಡುವ ವಾತಾವರಣ ಸೃಷ್ಟಿ ಮಾಡುತ್ತಿವೆ. ಇದು ಒಳ್ಳೆಯ ಸಂಪ್ರದಾಯವಲ್ಲ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರೌಢ ಶಾಲೆಗಳ ಶಾಲಾ ದಾಖಲಾತಿ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಇಂತಹ ಸಂದರ್ಭಗಳಲ್ಲಿ ಯಾವುದೇ ಸರಕಾರಿ ಶಾಲೆಯ ಮುಖ್ಯೋ ಪಾಧ್ಯಾಯರು ಎಸೆಸೆಲ್ಸಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಸಮಯದಲ್ಲಿ ಬೇರೆ ಶಾಲೆಗಳಿಂದ 9 ನೇ ತರಗತಿಯಿಂದ ಬೇರ್ಪಡೆ ಹಾಗೂ 10 ತರಗತಿಗೆ ಸೇರ್ಪಡೆಗೆ ಸಕಾರಣವನ್ನು ತಿಳಿಸಿ, ಎಲ್ಲಾ ಆಯಾಮದಿಂದಲೂ ಪರಿಶೀಲಿಸಿ ನ್ಯಾಯಯುತ, ನೈತಿಕ ಹಾಗೂ ನೈಜ ಕಾರಣವಿದ್ದಲ್ಲಿ ಅದರಂತೆ ಕ್ರಮ ವಹಿಸಬೇಕು. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ದುರುದ್ದೇಶದ ದಾಖಲಾತಿ ಆಗದಂತೆ ಎಚ್ಚರ ವಹಿಸುವುದು ಇದರಿಂದ ಸರಕಾರಿ ಶಾಲೆಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯೋಪಾಧ್ಯಾಯರು ಅಗತ್ಯ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ಶಾಲಾಭಿವೃದ್ಧಿ ಸಮಿತಿಗಳು ಈ ವಿಚಾರಗಳ ಬಗ್ಗೆ ಎಚ್ಚರದಿಂದ ಇದ್ದು ಇಂತಹ ವಿದ್ಯಮಾನಗಳನ್ನು ಗಮನಿಸಬೇಕು. ಶಿಕ್ಷಣ ಕೇವಲ ಫಲಿತಾಂಶವನ್ನು ಮಾತ್ರ ಅವಲಂಬಿಸಿಲ್ಲ ಅದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸುವ ಆಯಾಮವನ್ನು ಕೂಡ ಹೊಂದಿದೆ. ಇದರ ಬಗ್ಗೆ ಎಲ್ಲಾ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಪ್ರೌಢ ಶಿಕ್ಷಣ ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಘಟ್ಟ. ಸರಕಾರಿ ಅಥವಾ ಖಾಸಗಿ ವ್ಯವಸ್ಥೆಯಲ್ಲಿರುವ ಶಿಕ್ಷಣ ಸಂಸ್ಥೆಗಳು ಪ್ರತಿಯೊಂದು ವಿದ್ಯಾರ್ಥಿಗಳ ಕಾಳಜಿ ವಹಿಸುವುದರ ಜೊತೆಗೆ ಆಯಾ ಸಂಸ್ಥೆಗಳಲ್ಲಿ ಶಿಕ್ಷಣದ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೂ ವಿದ್ಯಾರ್ಥಿಗಳಿಗೆ ಭೌದ್ದಿಕ ಸಾಮರ್ಥ್ಯ ತುಂಬಿ ಅವರು ಗಳ ಶೈಕ್ಷಣಿಕ ಗುರಿಯ ದಡ ತಲುಪಿಸುವ ನೈತಿಕತೆಯನ್ನು ಪ್ರದರ್ಶಿಸಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೈಂದೂರು ಹಾಗೂ ಕುಂದಾಪುರ ವ್ಯಾಪ್ತಿಯ ಆಸಕ್ತ ಪ್ರೌಢ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಸಭೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಬೈಂದೂರು, ಕುಂದಾಪುರ, ಹಾಗೂ ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News