ಡಿ.17ರಂದು ಬನ್ನಂಜೆ ಬಾಬು ಅಮೀನ್ 80ರ ಸಂಭ್ರಮ ‘ಸಿರಿತುಪ್ಪೆ’ ಕಾರ್ಯಕ್ರಮ
ಉಡುಪಿ, ಡಿ.13: ತುಳುನಾಡಿನ ಸಮಗ್ರ ಜಾನಪದ ಆಚರಣೆ ಮತ್ತು ದೈವಾರಾಧನೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿರುವ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರ 80ರ ಸಂಭ್ರಮ ‘ಸಿರಿತುಪ್ಪೆ’ ಸಮಾರಂಭವನ್ನು ಡಿ.17ರಂದು ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಬನ್ನಂಜೆ ಬಾಬು ಅಮೀನ್- 80 ಅಭಿನಂದನಾ ಸಮಿತಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಈ ಕುರಿತು ಮಾಹಿತಿ ನೀಡಿದರು. ಬೆಳಿಗ್ಗೆ 8.45ರಿಂದ ಗುರು ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮ ಆರಂಭಗೊಳ್ಳಲಿದ್ದು, ಹಿದಾಯತುಲ್ಲ ಸಾಹೇಬ್ ಎರ್ಮಾಳು ಇವರಿಂದ ನಾಗಸ್ವರ ವಾದನ, ರವಿಕುಮಾರ್ ಕಪ್ಪೆಟ್ಟುರವರ ಡೋಲು ವಾದನ, ಏಡ್ಮೇರಿನ ಬೊಗ್ಗು ಪರವರಿಂದ ತುಳು ಪಾಡ್ದನದ ನಂತರ ಬೆಳಗ್ಗೆ 10 ಗಂಟೆಗೆ ಶ್ಯಾಮಿಲಿ ಸಮೂಹ ಸಂಸ್ಥೆಗಳ ಪ್ರವರ್ತಕ ಜಿ.ಶಂಕರ್ ಕಾರ್ಯಕ್ರಮವನ್ನು ಉಧ್ಘಾಟಿಸಲಿ ರುವರು.
ಹಿರಿಯ ಸಾಹಿತಿ ರೋಹಿಣಿ ಬಿ.ಎಂ. ಬನ್ನಂಜೆಯವರ ‘ತುಳುನಾಡ ಸುತ್ತ ಮುತ್ತ’ ಹಾಗೂ ‘ಗರೋಡಿ ಒಂದು ಚಿಂತನೆ’ ಪುಸ್ತಕಗಳನ್ನು ಅನಾವರಣ ಗೊಳಿಸಲಿರುವರು. ಬೆಳಗ್ಗೆ 10.30ಕ್ಕೆ ಬನ್ನಂಜೆಯವರ ಸಮಗ್ರ ಸಾಹಿತ್ಯ ಹಾಗೂ ಜನಪದ ಆಚರಣೆ ಸಂಕಥನಗಳ ಬಗ್ಗೆ 1ವಿಚಾರಗೋಷ್ಠಿ ಮತ್ತು ಮಧ್ಯಾಹ್ನ 1.30ಕ್ಕೆ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆಯಲ್ಲಿ ಆರಾಧನಗೋಷ್ಠಿ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಪ್ರೊ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮವು ನಡೆಯಲಿದ್ದು, ಹಿರಿಯ ಪತ್ರ ಕರ್ತ ದಿನೇಶ್ ಅಮೀನ್ ಮಟ್ಟು ಅಭಿನಂದನಾ ಭಾಷಣ ಮಾಡಲಿರುವರು. ಕುದ್ರೋಳಿ ದೇವಳದ ಕೋಶಾಧಿಕಾರಿ ಪದ್ಮರಾಜ್ ಆರ್. ‘ಸಿರಿ ಕುರಲ್’ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಿರುವರು. ಕೊನೆಯಲ್ಲಿ ಇತರೆ ಸಂಘ ಸಂಸ್ಥೆಗಳ ಹಾಗೂ ಹಿತೈಷಿಗಳ ಅಭಿನಂದನೆಗೆ ಅವಕಾಶ ಕಲ್ಪಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 11.4 ಕ್ಕೆ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಪ್ರಬುದ್ದ ಕಲಾವಿದರಿಂದ ಸುದರ್ಶನ ವಿಜಯ ಎಂಬ ಯಕ್ಷಗಾನ ಮತ್ತು ಮಧ್ಯಾಹ್ನ 2.45ಕ್ಕೆ ಬನ್ನಂಜೆಯವರ ಜೀವನಗಾಥೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಳಿವಿನಂಚಿನಲ್ಲಿ ರುವ ತುಳುನಾಡಿನ ಪರಿಕರಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ, ಜನಪದದ ಇತರೆ ಪ್ರಕಾರಗಳ ಪ್ರಾತಕ್ಷಿತೆ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ರಘುನಾಥ ಮಾಬಿಯಾನ್, ಕಾರ್ಯದರ್ಶಿ ಪಾಂಡು ಕೋಟ್ಯಾನ್, ಸಂಚಾಲಕ ಭಾಸ್ಕರ್ ಸುವರ್ಣ ಕನ್ನರ್ಪಾಡಿ, ಮಹೇಶ್ ಸುವರ್ಣ, ದಯಾನಂದ ಕರ್ಕೇರ ಉಪಸ್ಥಿತರಿದ್ದರು.