×
Ad

ಫೆ.24ರಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯಿಂದ ಕನ್ನಡ ಜಾಗೃತಿ ಕಾರ್ಯಕ್ರಮ

Update: 2025-02-19 21:33 IST

ಉಡುಪಿ, ಫೆ.19: ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಡಾ.ಸುನಿಲ್ ಎಂ.ಎಸ್. ಅವರು ಫೆ.23ರಂದು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಬೆಳಗ್ಗೆ 9ಕ್ಕೆ ರೆಡ್‌ಕ್ರಾಸ್ ಭವನದಲ್ಲಿ ನಡೆಸಿಕೊಡಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ವಿ. ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರುದಿನ ಫೆ.24ರಂದು ಡಾ.ಸುನಿಲ್ ನೇತೃತ್ವದಲ್ಲಿ ಉಡುಪಿಯಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಬ್ರಹ್ಮಗಿರಿ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ನಗರಸಭೆಗೆ ತೆರಳಿ ಪೌರಾಯುಕ್ತರಿಗೆ ಮನವಿ ಅರ್ಪಿಸಲಾಗುವುದು. ಅದೇ ರೀತಿ ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಜಿಲ್ಲೆಯ ಎಲ್ಲಾ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಕಡ್ಡಾಯವಾಗಿ ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗುವುದು ಎಂದರು.

ಜಿಲ್ಲೆಯ ಅದರಲ್ಲೂ ಉಡುಪಿ ನಗರ ಹಾಗೂ ಮಣಿಪಾಲಗಳ ಅಂಗಡಿ, ಶೋರೂಮ್‌ಗಳು, ಹೊಟೇಲ್, ಶಾಲಾ ಕಾಲೇಜುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ.60ರಷ್ಟು ಕಡ್ಡಾಯವಾಗಿ ಅಳವಡಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು ಎಂದರು.

ಈ ಅವಧಿಯಲ್ಲಿ ರಾಜ್ಯ ಸರಕಾರ ಕನ್ನಡ ಭಾಷೆ ಅಳವಡಿಸಲು ಹೊರಡಿ ಸಿರುವ ಆದೇಶವನ್ನು ಎಲ್ಲರೂ ಪಾಲಿಸಿ ನಾಮಫಲಕಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅವುಗಳಿಗೆ ಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಘಟಕದ ನಾಗೇಶ್, ಉಮೇಶ ಶೆಟ್ಟಿ, ರಾಜು ಹಾಗೂ ಸಂದೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News