ಜ.27ರಂದು ಮಣಿಪಾಲದಲ್ಲಿ ಹಿರಿಯ ಪತ್ರಕರ್ತ ಶೇಖರ ಗುಪ್ತಾರಿಂದ ದತ್ತಿ ಉಪನ್ಯಾಸ
ಉಡುಪಿ, ಜ.25: ದೇಶದ ಹಿರಿಯ ಪತ್ರಕರ್ತ ಹೊಸದಿಲ್ಲಿಯ ಶೇಖರ ಗುಪ್ತಾ ಅವರು ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ವತಿಯಿಂದ ನಡೆಯುವ ಡಾ.ಎಂ.ವಿ.ಕಾಮತ್ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಜ.27ರಂದು ಅಪರಾಹ್ನ 2:30ಕ್ಕೆ ಮಣಿಪಾಲದ ಹೊಟೇಲ್ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ಅಂಕಣಕಾರ, ಲೇಖಕ ಹಾಗೂ ಟಿವಿಗಳಲ್ಲಿ ಟಾಕ್‌ಶೋಗಳನ್ನು ಪ್ರಸ್ತುತ ಪಡಿಸುವ ಶೇಖರ ಗುಪ್ತಾ ಅವರು ಸದ್ಯ ವೆಬ್‌ಪತ್ರಿಕೆ ‘ದಿ ಪ್ರಿಂಟ್’ನ ಸ್ಥಾಪಕ ಹಾಗೂ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ‘ಇಂಡಿಯಾ ಟುಡೆ’ ಪಾಕ್ಷಿಕ ಬಳಿಕ ಸಾಪ್ತಾಹಿಕ ದ ಮೂಲಕ ದೇಶದ ಪ್ರಮುಖ ಪತ್ರಕರ್ತರಲ್ಲಿ ಗುರುತಿಸಿಕೊಂಡ ಶೇಖರ ಗುಪ್ತ ಅದರ ವರದಿಗಾರ, ಸಂಪಾದಕರಾಗಿ ದೇಶ-ವಿದೇಶಗಳ ಪ್ರಮುಖ ಘಟನೆಗಳನ್ನು ವರದಿ ಮಾಡಿದ್ದರು.
ಐದು ದಶಕಗಳ ತಮ್ಮ ಪತ್ರಕರ್ತನ ಬದುಕಿನಲ್ಲಿ ಶೇಖರ ಗುಪ್ತಾ, ಈಶಾನ್ಯ ಭಾರತದ ಹಲವು ದುರ್ಘಟನೆ, ಆಪರೇಷನ್ ಬ್ಲೂಸ್ಟಾರ್, ಜರ್ಮನಿಯ ಬರ್ಲಿನ್ ಗೋಡೆ ಪತನ, ಕೊಲ್ಲಿ ಯುದ್ಧ, ದಶಕಗಳ ಕಾಲ ಶ್ರೀಲಂಕಾದ ಆಂತರಿಕ ತುಮಲ ಗಳನ್ನು ಅವರು ಇಂಡಿಯಾ ಟುಡೆಗಾಗಿ ಸತತವಾಗಿ ವರದಿ ಮಾಡಿದ್ದರು.
ಇಂಡಿಯಾ ಟುಡೆಯ ಬಳಿಕ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಗುಪ್ತಾ, 2018ರಲ್ಲಿ ಭಾರತದ ಎಡಿಟರ್ ಗಿಲ್ಡ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು ಎಂದು ಎಂಐಸಿ ಪ್ರಕಟಣೆಯಲ್ಲಿ ತಿಳಿಸಿದೆ.