ಜ.31ರಂದು ಉಡುಪಿ, ಮಂಗಳೂರಿನಲ್ಲಿ ‘ಚಕೋರ’ದಿಂದ ವಿಶೇಷ ಉಪನ್ಯಾಸ
ಉಡುಪಿ, ಜ.30: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಸಾಹಿತ್ಯವನ್ನು ಜನರೆಡೆಗೆ ಕೊಂಡೊಯ್ಯುವ ಮತ್ತು ಜನ ತಂತ್ರ ಹಾಗೂ ಸಾಂವಿಧಾನಿಕ ಆಶಯಕ್ಕೆ ಪೂರಕವಾಗಿ ಸಾಹಿತ್ಯ ಚರ್ಚೆಯನ್ನು ಸಮೂಹದ ನಡುವೆ ವಿಸ್ತರಿಸುವ ಸಲುವಾಗಿ ರಚಿಸಿರುವ ಜಿಲ್ಲಾ ಮಟ್ಟದ ಸಾಹಿತ್ಯ ವಿಚಾರ ವೇದಿಕೆಯಾದ ಚಕೋರ ಉಡುಪಿ ಹಾಗೂ ಚಕೋರ ದ.ಕ ಜಿಲ್ಲೆಯ ಜನವರಿ ತಿಂಗಳ ಕಾರ್ಯಕ್ರಮ ಜ.31ರಂದು ಕ್ರಮವಾಗಿ ಸ.ಪ.ಪೂ ಕಾಲೇಜು ತೆಂಕನಿಡಿಯೂರು ಉಡುಪಿ ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮಂಗಳೂರು ನಡೆಯಲಿವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ತಿಳಿಸಿದ್ದಾರೆ.
ಉಡುಪಿಯಲ್ಲಿ ತೆಂಕನಿಡಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಎ.ವಿ.ಹಾಲ್‌ನಲ್ಲಿ ಬೆಳಗ್ಗೆ 10:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಡಾ.ಸುಧಾಕರ ದೇವಾಡಿಗ ಅವರು ‘ಶಿವರಾಮ ಕಾರಂತರ ಗೀತ ನಾಟಕಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅದೇ ರೀತಿ ಅಪರಾಹ್ನ 2:30ಕ್ಕೆ ಅಲೋಶಿಯಸ್ ಕಾಲೇಜಿನ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕಾಲೇಜಿನ ಡಾ.ಮದಗೊಂಡ ಬಿರಾದಾರ ಅವರು ‘ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ’ ಕುರಿತು ಮಾತನಾಡಲಿದ್ದಾರೆ.ಅಲೋಶಿಯ್ ಡೀಮ್ಡ್ ವಿವಿಯ ಸಹಕುಲಪತಿ ರೆ.ಡಾ.ಮೆಲ್ವಿನ್ ಡಿ ಕುನ್ಹಯಸ್ ಜೆ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಡಾ.ಶೆಟ್ಟಿ ತಿಳಿಸಿದ್ದಾರೆ.