34ನೇ ’ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನ
ಕುಂದಾಪುರ, ಸೆ.29: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ 34 ನೇ ’ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನ ರವಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಕುಂದಾಪುರ ಪುರಸಭೆಯ ಪರಿಸರ ಎಂಜಿನಿಯರ್ ಗುರುಪ್ರಸಾದ್ ಮಾತನಾಡಿ, ಮನುಷ್ಯರಾಗಿ ಈ ಭೂಮಿ ಮೇಲೆ ಹುಟ್ಟಿರುವುದೇ ನಮ್ಮ ಪುಣ್ಯ. ಈ ಭೂಮಿ ಎಲ್ಲವನ್ನೂ ನಮಗೆ ಕೊಟ್ಟಿದೆ. ಆದರೆ ನಾವು ಇದನ್ನು ಹಾಳು ಮಾಡಬಾರದು. ನಾವು ದಿನನಿತ್ಯ ಬಳಕೆಯಲ್ಲಿ ಶೇ.50ರಷ್ಟು ಪ್ಲಾಸ್ಟಿಕ್ ಬಳಸುತ್ತೇವೆ. ಇದರಿಂದ ಪರಿಸರಕ್ಕೆ ಹಾನಿಯಾ ಗುತ್ತಿದೆ. ಇದನ್ನು ನಾವು ತಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಸತತ 34 ತಿಂಗಳಿಂದ ನಡೆಸುತ್ತಿರುವ ಈ ಸ್ವಚ್ಛತಾ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಅಬೂಬಕ್ಕರ್ ಸಿದ್ದಿಕ್ ಬ್ಯಾರಿ ಮಾತನಾಡಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಹಸಿರು ಕಟ್ಟಡಗಳ ಸಪ್ತಾಹ 2024ರ ಅಂಗವಾಗಿ ನಡೆದ ವಿವಿಧ ಕಾರ್ಯ ಕ್ರಮ ಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿರುವುದು ಪ್ರಶಂಸನೀಯ. ಚೆನ್ನೈ, ಮುಂಬೈ ನಗರಗಳಲ್ಲಿ ದೊಡ್ಡ ದೊಡ್ಡ ಬೀಚ್ ಗಳಿವೆ. ಆದರೆ ಅವು ಸ್ವಚ್ಛವಾಗಿಲ್ಲ. ಆದರೆ ನಮ್ಮ ಕೋಡಿಯ ಕಡಲತೀರ ಎಲ್ಲರ ಪ್ರಯತ್ನದಿಂದ ಸ್ವಚ್ಛವಾಗಿದೆ. ಇದು ಹೆಮ್ಮೆಯ ವಿಚಾರ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಶುಭಹಾರೈಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿಯ ಸದಸ್ಯ ಡಾ. ಆಸೀಫ್ ಬ್ಯಾರಿ, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಪದವಿಪೂರ್ವ ಕಾಲೇಜಿನ ಮತ್ತು ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಬಿ.ಎಡ್. ಕಾಲೇಜಿನ ಉಪಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಪೂರ್ಣಿಮಾ ಟಿ., ಶಾಲಾಭಿವೃದ್ಧಿ ಮತ್ತು ಸಲಹಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ-ಬೋಧಕೇತರರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದರು.