2650 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 65 ರೈಲು ನಿಲ್ದಾಣಗಳ ಅಭಿವೃದ್ಧಿ: ಸಚಿವ ವಿ.ಸೋಮಣ್ಣ
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ
ಉಡುಪಿ, ಸೆ.21: ಅಮೃತಭಾರತ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆ ಯಡಿ ರಾಜ್ಯದ 65 ರೈಲು ನಿಲ್ದಾಣಗಳನ್ನು 2650 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತಿದ್ದು, ಇವುಗಳಲ್ಲಿ ಈಗಾಗಲೇ 16 ರೈಲು ನಿಲ್ದಾಣಗಳ ಅಭಿವೃದ್ಧಿ ಪೂರ್ಣಗೊಂಡಿವೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಸುಮಾರು ಏಳು ವರ್ಷಗಳ ವಿಳಂಬದ ಬಳಿಕ ಕೊನೆಗೂ 14 ಕೋಟಿ ರೂ.ಗಳ ವೆಚ್ಚದಲ್ಲಿ ಕೇಂದ್ರೀಯ ಭೂಸಾರಿಗೆ ಮಂತ್ರಾಲಯದ ಮೂಲಕ ನಿರ್ಮಾಣಗೊಂಡ ರಾಷ್ಟ್ರೀಯ ಹೆದ್ದಾರಿ 169ಎ ಉಡುಪಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಯನ್ನು ರವಿವಾರ ಅಪರಾಹ್ನ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.
ಯೋಜನೆಯಡಿ ಉಡುಪಿ ರೈಲು ನಿಲ್ದಾಣವೂ ಸೇರಿದಂತೆ ಮಂಗಳೂರು ಜಂಕ್ಷನ್‌ನಿಂದ ಕಾರವಾರದವರೆಗೆ ರೈಲು ನಿಲ್ದಾಣಗಳ ಅಭಿವೃದ್ಧಿಯಾಗಲಿವೆ. ಅಲ್ಲದೇ ಯುಪಿಎ ಸರಕಾರದ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ 49ಸಾವಿರ ಕೋಟಿ ರೂ.ಗಳ ಅಗತ್ಯ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುತ್ತಿದೆ ಎಂದವರು ನುಡಿದರು.
ಅದೇ ರೀತಿ ಚಿಕ್ಕಮಗಳೂರು, ಅರಸಿಕೆರೆ, ತುಮಕೂರು ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಉಡುಪಿ-ಕಾರ್ಕಳ- ಧರ್ಮಸ್ಥಳ- ಸುಬ್ರಹ್ಮಣ್ಯ ನಡುವೆ ರೈಲು ಸಂಪರ್ಕದ ಕುರಿತು ಸ್ಥಳೀಯ ಶಾಸಕರು ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಈಗ ಬೆಂಗಳೂರಿನಿಂದ ಸಕಲೇಶಪುರದವರೆಗೆ ವೇಗವಾಗಿ ಬರುವ ರೈಲುಗಳು ನಂತರದ 40ಕಿ.ಮೀ. ದೂರದ ಘಟ್ಟ ಪ್ರದೇಶವನ್ನು ಕ್ರಮಿಸಲು ಎರಡು ಗಂಟೆಗೂ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತಿದೆ. ಇನ್ನು ಒಂದು ತಿಂಗಳಲ್ಲಿ ಈ ಮಾರ್ಗದ ವಿದ್ಯುದ್ದೀಕರಣ (ಇಲೆಕ್ಟ್ರಿಪಿಕೇಷನ್) ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ಅವರು ನೀಡಿದರು.
ಉಡುಪಿಯ ರೈಲು ನಿಲ್ದಾಣಕ್ಕೆ ಶ್ರೀಕೃಷ್ಣ ರೈಲು ನಿಲ್ದಾಣ ಎಂದು ಮರು ನಾಮಕರಣ ಮಾಡಲು ಸ್ಥಳೀಯ ಸಂಸತ್ ಸದಸ್ಯರಿಂದ ಮನವಿ ಬಂದಿದ್ದು, ಈ ಬಗ್ಗೆ ರಾಜ್ಯ ಸರಕಾರದಿಂದ ಅಭಿಪ್ರಾಯವನ್ನು ಕೇಳಿದ್ದೇವೆ. ಅಲ್ಲಿಂದ ಅನುಮೋದನೆ ದೊರಕಿದ ಬಳಿಕ ಅಧಿಕೃತ ನಾಮಕರಣ ಮಾಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಆಡಳಿತದ ಎನ್‌ಡಿಎ ಸರಕಾರವು ಕಳೆದ 11 ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು 1,76,525 ಕೋಟಿ ರೂ. ನೀಡಿದೆ. ಇದು ಯುಪಿಎ ಆಡಳಿತ ಕಾಲದಲ್ಲಿ ದೊರಕಿದ್ದಕ್ಕಿಂತ ಎಷ್ಟೋ ಪಾಲು ಅಧಿಕ. ರಾಜ್ಯದಲ್ಲಿ ಆಗಿದ್ದ 5,000ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಜಾಲ ಈಗ 10,000 ಕಿ.ಮೀ.ಗೆ ದ್ವಿಗುಣಗೊಂಡಿದೆ ಎಂದರು.
ಕರಾವಳಿ ಭಾಗದಲ್ಲಿ ಈ ಅವಧಿಯಲ್ಲಿ 10,000 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಇವುಗಳಲ್ಲಿ ಬಹುಪಾಲು ನಿತಿನ್ ಗಡ್ಕರ್ ಅವರ ಭೂಸಾರಿಗೆ ಇಲಾಖೆಯಿಂದ ನಡೆಯುತ್ತಿದೆ ಎಂದು ಅವರು ಅಂಕಿ ಅಂಶ ಸಮೇತ ವಿವರಿಸಿದರಲ್ಲದೇ ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಪಾಲಿನ ಬಗ್ಗೆ ತಕರಾರು ತೆಗೆಯುತಿದ್ದಾರೆ ಎಂದು ಟೀಕಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಈ ಸೇತುವೆ ಕಳೆದ ಆರು-ಏಳು ವರ್ಷ ಗಳಿಂದ ಚರ್ಚೆಯಲ್ಲಿದೆ. ನಮ್ಮದೇ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಪ್ರಕರಣವನ್ನು ನಾನು ಬೇರೆಲ್ಲೂ ನೋಡಿಲ್ಲ, ಆದರೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ನಾವು ಮೊದಲ ಬಾರಿಗೆ ಎನ್‌ಎಚ್‌ಎ ಅಧಿಕಾರಿ ಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕಾಯಿತು ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ ರೈಲ್ವೆ ನಿಲ್ದಾಣಕ್ಕೆ ಶ್ರೀಕೃಷ್ಣ ರೈಲ್ವೆ ನಿಲ್ದಾಣ ಎಂದು ಮರು ನಾಮಕರಣ ಮಾಡುವ ನಮ್ಮ ಪ್ರಸ್ತಾಪವನ್ನು ಬೆಂಬಲಿಸಿದ ಸಚಿವ ಸೋಮಣ್ಣರಿಗೆ ಕೃತಜ್ಞತೆ ಅರ್ಪಿಸಿದರಲ್ಲದೇ, ಕಾಮಗಾರಿಯ ಕುರಿತು ಟೀಕೆ, ಪ್ರತಿಭಟನೆ ನಡೆದ ಬಗ್ಗೆ ಪ್ರಸ್ತಾಪಿಸಿ, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣ ಗೊಳಿಸಲು ಇವು ನಮಗೆ ಪ್ರೇರಣೆ ನೀಡಿದವು ಎಂದರು.
ಶಾಸಕರಾದ ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್‌ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಆಯುಕ್ತ ಮಹಂತೇಶ್ ಹಂಗರಗಿ, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಉಡುಪಿ ನಗರಸಭೆ ವತಿಯಿಂದ ಸಚಿವ ವಿ. ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು. ನಗರಸಭಾ ಸದಸ್ಯ ಗಿರೀಶ್ ಆಂಚನ್ ಅತಿಥಿ ಗಳನ್ನು ಸ್ವಾಗತಿಸಿದರು.