ಉಡುಪಿ | ನ.25ರಿಂದ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ ಜಿಲ್ಲೆಯ 94 ಶಾಲೆಗಳು ಭಾಗವಹಿಸಲಿವೆ : ಮುರಲಿ ಕಡೆಕಾರ್
ಉಡುಪಿ, ನ.18: ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಕಳೆದ 17 ನಡೆಸಿಕೊಂಡು ಬರುತ್ತಿರುವ ಪ್ರೌಢ ಶಾಲಾ ಮಕ್ಕಳ ಯಕ್ಷಗಾನ ಪ್ರದರ್ಶನ ‘ಕಿಶೋರ ಯಕ್ಷಗಾನ ಸಂಭ್ರಮ’ ಈ ಬಾರಿ ನ.25ರಿಂದ ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 94 ಶಾಲಾ ತಂಡಗಳು ಇದರಲ್ಲಿ ಭಾಗವಹಿಸಲಿವೆ ಎಂದು ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಸೀಮಿತವಾಗಿ ಪ್ರಾರಂಭಗೊಂಡ ಕಿಶೋರ ಯಕ್ಷಗಾನ ಸಂಭ್ರಮ, ಶೀಘ್ರದಲ್ಲೇ ಜನಪ್ರಿಯತೆಯನ್ನು ಪಡೆದು ಇದೀಗ ಕಾಪು, ಕುಂದಾಪುರ ಹಾಗೂ ಬೈಂದೂರು ಶಾಸಕರ ಕೋರಿಕೆಯಂತೆ ಆಯಾ ವಿಧಾನಸಭಾ ವ್ಯಾಪ್ತಿಯಲ್ಲಿ ಈ ಬಾರಿ ಪ್ರದರ್ಶನಗಳು ನಡೆಯಲಿವೆ. ಈ ಬಾರಿ 3,000ಕ್ಕೂ ಅಧಿಕ ಹೈಸ್ಕೂಲ್ ವಿದ್ಯಾರ್ಥಿಗಳು ಇದರಲ್ಲಿ ಬಣ್ಣ ಧರಿಸಿ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ ಎಂದರು.
2025ನೇ ಸಾಲಿನಲ್ಲಿ ಒಟ್ಟು 41 ಮಂದಿ ಗುರುಗಳು 94 ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನದ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದ್ದಾರೆ. ಮೊದಲು ಬಾಲಕರಿಗೆ ಸೀಮಿತವಾಗಿದ್ದ ಕಿಶೋರ ಸಂಭ್ರಮ ನಂತರ ಬಾಲಕಿಯರಿಗೂ ವಿಸ್ತರಣೆಗೊಂಡಿದ್ದು, ಇದೀಗ ಹೊರ ಜಿಲ್ಲೆಗಳ, ಎಲ್ಲಾ ಧರ್ಮಗಳ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಳ್ಳುವ ವಾರ್ಷಿಕ ಹಬ್ಬದಂತಾಗಿದೆ ಎಂದು ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಯೂ ಆಗಿರುವ ಮುರಲಿ ಕಡೆಕಾರ್ ತಿಳಿಸಿದರು.
‘ಕಿಶೋರ ಯಕ್ಷಗಾನ ಸಂಭ್ರಮ- 2025’ ಒಟ್ಟು 12 ಆಯ್ದ ಸ್ತಳಗಳಲ್ಲಿ ನ.25ರಿಂದ ಡಿಸೆಂಬರ್ 31ರಿಂದ ನಡೆಯಲಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರದಲ್ಲಿ ನ.25ರಿಂದ ಇದು ಪ್ರಾರಂಭಗೊಳ್ಳಲಿದೆ. ಡಿ.1ರವರೆಗೆ ಬ್ರಹ್ಮಾವರ ಬಂಟರ ಭವನದ ಬಳಿ ಯಕ್ಷ ಸಂಭ್ರಮ ನಡೆಯಲಿದೆ. ಒಟ್ಟು 13 ಪ್ರೌಢ ಶಾಲಾ ತಂಡಗಳು ಇಲ್ಲಿ ಯಕ್ಷಗಾನ ಪ್ರದರ್ಶಿಸಲಿದೆ.
ಈ ಬಾರಿ ಉಡುಪಿ ರಾಜಾಂಗಣದಲ್ಲಿ ಡಿ.2ರಿಂದ 18ರವರೆಗೆ ಒಟ್ಟು 25 ತಂಡಗಳು ತಮ್ಮ ಪ್ರದರ್ಶನವನ್ನು ನೀಡಲಿವೆ. ಕಾಪು ವಿಧಾನಸಭಾ ಕ್ಷೇತ್ರದ ಹಿರಿಯಡಕ ಶ್ರೀವೀರಭದ್ರ ದೇವಸ್ಥಾನದ ವಠಾದಲ್ಲಿ ಡಿ.3 ಮತ್ತು 4ರಂದು ನಾಲ್ಕು ತಂಡಗಳು ಪ್ರದರ್ಶನ ನೀಡಲಿವೆ. ಬಳಿಕ ಡಿ.5ರಿಂದ 7ರವರೆಗೆ ಮೂರು ದಿನಗಳ ಕಾಲ ಶಿರ್ವದ ಮಹಿಳಾ ಸೌಧದಲ್ಲಿ ಆರು ಶಾಲೆಗಳು ಪ್ರದರ್ಶನ ನೀಡಲಿವೆ. ಅದೇ ಕ್ಷೇತ್ರದ ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ಡಿ.8ರಿಂದ 11ರವರೆಗೆ ಒಟ್ಟು ಎಂಟು ಶಾಲಾ ತಂಡಗಳ ಪ್ರದರ್ಶನ ನಡೆಯಲಿದೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನ ವಠಾರದಲ್ಲಿ ಡಿ.12ರಿಂದ 15ರವರೆಗೆ ಎಂಟು ತಂಡಗಳು ಪ್ರತಿದಿನ ಸಂಜೆ ತಲಾ ಎರಡರಂತೆ ಪ್ರದರ್ಶನ ನೀಡಲಿವೆ. ಡಿ.6ರಿಂದ 19ರವರೆಗೆ ಬಿದ್ಕಲ್ಕಟ್ಟೆಯ ಹಾರ್ದಳ್ಳಿ-ಮಂಡಳ್ಳಿ ಗ್ರಾಮಪಂಚಾಯತ್ ವಠಾರದಲ್ಲಿ ಏಳು ಶಾಲಾ ತಂಡಗಳು ತಮ್ಮ ಪ್ರದರ್ಶನ ನೀಡಲಿವೆ. ಡಿ.20ರಿಂದ 22ರವರೆಗೆ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುಂದಾಪುರ, ತೆಕ್ಕಟ್ಟೆ, ಬಸ್ರೂರು, ಕಾಳಾವರ, ಕೋಟೇಶ್ವರ ಶಾಲಾ ತಂಡಗಳು ಪ್ರದರ್ಶನ ನೀಡಲಿವೆ.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಕ್ಲಾಡಿ ಕೆ.ಎಸ್.ಎಸ್. ಸರಕಾರಿ ಪ್ರೌಢ ಶಾಲೆಯಲ್ಲಿ ಡಿ.23ರಿಂದ 25ರವರೆಗೆ ಮೂರು ದಿನಗಳ ಕಾಲ ಐದು ತಂಡಗಳು ಪ್ರದರ್ಶನ ನೀಡಲಿದ್ದು, ಡಿ.26 ಮತ್ತು 27ರಂದು ಸಿದ್ಧಾಪುರದ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ನಾಲ್ಕು ಶಾಲಾ ತಂಡಗಳು ಪ್ರದರ್ಶನ ನೀಡಲು ಸಿದ್ಧವಾಗಿವೆ. 28 ಮತ್ತು 29ರಂದು ಬೈಂದೂರಿನಲ್ಲಿ ನಾಲ್ಕು ಶಾಲೆಗಳ ಪ್ರದರ್ಶನ ನಡೆದರೆ, ಡಿ.30 ಮತ್ತು 31ರಂದು ಚಿತ್ತೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಶಾಲಾ ತಂಡಗಳ ಪ್ರದರ್ಶನವಿರುತ್ತದೆ ಎಂದು ಮುರಲಿ ಕಡೆಕಾರ್ ತಿಳಿಸಿದ್ದಾರೆ.