ಆರೋಗ್ಯ ಸಮಸ್ಯೆ ಮರೆಮಾಚಿ ಮದುವೆ ಆರೋಪ| ಪತ್ನಿ ಮೃತ್ಯು: ಮನೆಯವರ ವಿರುದ್ಧ ಪತಿಯಿಂದ ದೂರು
ಕಾರ್ಕಳ, ಸೆ.14: ಪತ್ನಿಯ ಆರೋಗ್ಯ ಸಮಸ್ಯೆಯನ್ನು ಮರೆಮಾಚಿ ಮದುವೆ ಮಾಡಿಸಿರುವುದಾಗಿ ಪತಿ ನೀಡಿದ ದೂರಿನಂತೆ ಪತ್ನಿಯ ಮನೆಯವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇತನ್ ಎಂಬವರು ಕರುಣಾಕರ ಹೆಗ್ಡೆ ಹಾಗೂ ಕವಿತಾ ಎಂಬವರ ಮಗಳು ವಿನಿತಾ ಎಂಬವರನ್ನು 2018ರ ಡಿ.21ರಂದು ಮದುವೆಯಾಗಿದ್ದು ಮದುವೆಯಾಗುವ ಸಮಯ ಚೇತನ್ ತನ್ನ ಪತ್ನಿಗೆ ಕೆಲವು ಚಿನ್ನದ ಆಭರಣಗಳನ್ನು ನೀಡಿದ್ದರು. ಮದುವೆಯಾದ ನಂತರ ಇವರಿಬ್ಬರು ಉದ್ಯೋಗದ ಸಂಬಂಧ ಬೆಂಗಳೂರಿನಲ್ಲಿ ವಾಸವಾಗಿದ್ದರು. 2022ರ ಡಿ.29ರಂದು ಇವರಿಗೆ ಗಂಡು ಮಗು ಜನಿಸಿತ್ತು.
ಮದುವೆಯಾಗುವ ಮೊದಲೇ ವಿನಿತಾಗೆ ಕಣ್ಣಿನ ಸಮಸ್ಯೆ ಇದ್ದು ಚಿಕಿತ್ಸೆ ಮಾಡಿಸಿದರೂ ಬಲಕಣ್ಣಿನ ದೃಷ್ಟಿ ಕಳೆದು ಕೊಂಡಿದ್ದರು. ನಂತರ ಅವರಿಗೆ ಮೆದುಳಿನ ಕ್ಯಾನ್ಸರ್ ಇರುವುದು ಕೂಡ ತಿಳಿದುಬಂತು. ವಿನಿತಾಗೆ ಮದುವೆ ಯಾಗುವ ಮೊದಲೇ ಆರೋಗ್ಯದ ಸಮಸ್ಯೆ ಇರುವ ವಿಚಾರ ತಂದೆಗೆ ತಿಳಿದಿದ್ದರೂ ಮೋಸದಿಂದ ಮದುವೆ ಮಾಡಿರು ವುದಾಗಿ ದೂರಲಾಗಿದೆ. ಚೇತನ್ ಚಿಕಿತ್ಸೆ ಕೊಡಿಸಿದರೂ ವಿನಿತಾ 2023ರ ಡಿ.18ರಂದು ಮೃತ ಪಟ್ಟಿದ್ದರು.
ಕರುಣಾಕರ ಹೆಗ್ಡೆ, ವಿನೋದ, ಕವಿತಾ ಹೆಗ್ಡೆ, ಅಮಿತಾ ಹೆಗ್ಡೆ, ವಿಶ್ವನಾಥ ಹೆಗ್ಡೆ ಎಂಬವರು ಚೇತನ್ ಅವರಿಗೆ ಮೋಸ ಮಾಡುವ ಉದ್ದೇಶದಿಂದ ವಿನಿತಾಗೆ ಇದ್ದ ಕಾಯಿಲೆಯ ವಿಚಾರವನ್ನು ಮರೆಮಾಚಿದಲ್ಲದೆ, ಅವರ ಹೆಂಡತಿಗೆ ಮದುವೆ ಸಮಯ ಕೊಟ್ಟಿದ್ದ ಚಿನ್ನಾಭರಣ ಮತ್ತು ಮೊಬೈಲ್ ಫೋನನ್ನು ವಾಪಾಸು ಕೊಡದೇ ನಂಬಿಕೆ ದ್ರೋಹವನ್ನುಂಟು ಮಾಡಿರುವುದಾಗಿ ದೂರಲಾಗಿದೆ.