×
Ad

ಕಾರಂತರಂತಹ ವಿದ್ವಾಂಸರ ಪ್ರವೇಶದಿಂದ ಮಾತ್ರ ಕಲೆ ಉಳಿಯಲು ಸಾಧ್ಯ: ಡಾ.ಬಿಳಿಮಲೆ

Update: 2025-07-22 20:39 IST

ಉಡುಪಿ, ಜು.22: ಯಕ್ಷಗಾನ ಹೊರತು ಪಡಿಸಿ ಕರ್ನಾಟಕದ ಇತರ ಯಾವುದೇ ಕಲೆಗಳಿಗೂ ಒಬ್ಬನೇ ಒಬ್ಬ ಶಿವರಾಮ ಕಾರಂತ ಇವತ್ತಿನವರೆಗೆ ಸಿಕ್ಕಿಲ್ಲ. ಹಾಗಾಗಿ ಯಕ್ಷಗಾನ ಇಂದಿಗೂ ಉಳಿದಿವೆ ಮತ್ತು ಇತರ ಕಲೆಗಳು ನಾಶದ ಅಂಚಿಗೆ ತಲುಪಿದೆ. ಕಾರಂತರು ಕರಾವಳಿಯಲ್ಲಿ ಯಕ್ಷಗಾನ ಬದುಕಿಸಿದ ರೀತಿ ದೇಶದ ಯಾವುದೇ ಕಲೆಗಳಲ್ಲೂ ಆಗಿಲ್ಲ. ಕಾರಂತರಂತೆ ವಿದ್ವಾಂಸರು ಕಲೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಕಲೆ ಉಳಿಯುತ್ತದೆ. ಆ ನಿಟ್ಟಿನಲ್ಲಿ ಕಲೆಗೆ ವಿದ್ಯಾವಂತರ ಪ್ರವೇಶ ಅಗತ್ಯವಾಗಿ ಆಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಉಡುಪಿ ರಥಬೀದಿ ಗೆಳೆಯರು ಸಹಯೋಗದಲ್ಲಿ ಮಂಗಳವಾರ ಉಡುಪಿ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಲಾದ ಅರವಿನ ಬೆಳಕು ಉಪನ್ಯಾಸ ಮಾಲೆ-7 ಕಾರ್ಯಕ್ರಮದಲ್ಲಿ ಅವರು ‘ಡಾ.ಶಿವರಾಮ ಕಾರಂತರ ಬದುಕು ಮತ್ತು ಬರಹಗಳ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದರು.

ಭೂಮಸೂದೆ ಕಾಯಿದೆಯಿಂದ ಜಮೀನು ಪಡೆದವರು ಇಂದು ತಮ್ಮ ಭೂಮಿಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಪರಿಣಾಮ ಜಮೀನು ಎಂಬುದು ಕೆಲವರ ಕೈಯಲ್ಲಿ ಕ್ರೋಡೀಕರಣ ವಾಗುತ್ತಿದೆ. ಕಾರಂತರು ತನ್ನ ಕಾದಂಬರಿಯಲ್ಲಿ ಬರುವ ಚೋಮನಿಗೆ ಭೂಮಿ ಸಿಗಬೇಕೆಂದು ಆಸೆ ಪಟ್ಟರು. ಆದರೆ ಇಂದು ಆ ಚೋಮ ಮತ್ತೆ ಜಮೀನುನನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದಾನೆ. ಈ ಸಂದೇಶ ನಮಗೆ ಸಿಕ್ಕಿದರೆ ಕಾರಂತರು ನಮ್ಮ ಒಳಗೆ ಜೀವಂತವಾ ಗಿರುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿವರಾಮ ಕಾರಂತರು ಚೋಮನ ದುಡಿಯಂತಹ ಕಾದಂಬರಿ ಬರೆದಿರುವುದು ಅವರ ಶ್ರೇಷ್ಠತೆಯಾಗಿದೆ. ಈ ದೇಶದ ನಿಜವಾದ ಸಮಸ್ಯೆ ಇರುವುದು ನೆಲ ಹಂಚಿಕೆ ಯಲ್ಲಿಯೇ ಹೊರತು ಬ್ರಿಟಿಷರು ಇಲ್ಲಿ ಇರುವುದರಿಂದಲ್ಲ ಎಂಬುದನ್ನು ಶಿವರಾಮ ಕಾರಂತರು ಪ್ರತಿಪಾದಿ ಸಿದ್ದರು. ಇದು ಕಾಲವನ್ನು ಮೀರಿದ ಯೋಚನೆಯಾಗಿದೆ. ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿಯು ಕನ್ನಡದ ಮೊದಲ ಸ್ತ್ರೀವಾದಿ ಕಾದಂಬರಿಯಾಗಿದೆ ಎಂದರು.

20ನೇ ಶತಮಾನದಲ್ಲಿನ ಪರಿಸರ ನಾಶ, ಸಾಹಿತ್ಯಿಕವಾಗಿ ಬಂಡಾಯ, ದಲಿತ, ಪ್ರಗತಿಪರ ಹಾಗೂ ನವ್ಯ ಚಳವಳಿಗಳಿಗೆ ಧೀಮಂತ ಹಾಗೂ ಜವಾಬ್ದಾರಿಯಿಂದ ಪ್ರತಿಕ್ರಿಯಿಸಿದ ಇಬ್ಬರು ಲೇಖಕರು ಅಂದರೆ ಕುವೆಂಪು ಮತ್ತು ಶಿವರಾಮ ಕಾರಂತರು. ಕನ್ನಡ ಭಾಷೆಗೆ ಸಂಬಂಧಿಸಿ ಬರೆದ ಲೇಖನ, ಮಾತುಗಳಿಂದ ಹಾಗೂ ಧರ್ಮದ ಬಗೆಗಿನ ವ್ಯಾಖ್ಯಾನದಿಂದ ಕುವೆಂಪು ನಮಗೆ ಇಂದಿಗೂ ಪ್ರಸ್ತುತರಾಗಿದ್ದಾರೆ. ಪ್ರಸ್ತುತ ಧರ್ಮ ರಾಜಕಾರಣವಾಗಿ ಬೇರೆ ಆಯಾಮ ತೆಗೆದುಕೊಂಡಿರುವಾಗ ಕುವೆಂಪು ಅವರನ್ನು ಓದುವುದು ಅಗತ್ಯ ಎಂದರು.

ಕಾರ್ಯಕ್ರಮವನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಭಾಷಾ ವಿಜ್ಞಾನಿ ಡಾ.ಕೆ.ಪಿ.ರಾವ್, ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಿಳಿಮಲೆ ಜೊತೆ ಸಂವಾದ ನಡೆಯಿತು. ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ನಿಕೇತನ ಕಾರ್ಯಕ್ರಮ ನಿರೂಪಿಸಿದರು.

‘ನಮ್ಮ ಇಡೀ ವ್ಯವಸ್ಥೆಗೆ ಇಂದು ಪರಿಸರ ಎಂಬುದು ಉದ್ಯಮವಾಗಿದ್ದರೆ ಶಿವರಾಮ ಕಾರಂತರಿಗೆ ಪರಿಸರ ಎಂಬುದು ಜೈವಿಕವಾಗಿತ್ತು. ಪರಿಸರವನ್ನು ಉದ್ಯಮವನ್ನಾಗಿಸಿದ ಪರಿಣಾಮಗಳಿಂದಾಗಿ ಇಂದು ದುರಂತಗಳು ಸಂಭವಿಸುತ್ತಿವೆ. ಕಾರಂತರು ಪರಿಸರವನ್ನು ಉದ್ಯಮವಾಗಿ ನೋಡದೆ ಜೈವಿಕ ಪ್ರತಕ್ರಿಯೆಯಾಗಿ ನೋಡಿದರು. ಅದಕ್ಕೆ ಅತ್ಯುತ್ತಮ ಉದಾಹರಣೆ ಅವರ ಬೆಟ್ಟ ಜೀವ ಕಾದಂಬರಿ’

-ಡಾ.ಪುರುಷೋತ್ತಮ ಬಿಳಿಮಲೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News