ಎಡವಟ್ಟು | ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಬಿಜೆಪಿ ಮುಖಂಡನ ಫೋಟೋ!
ಉಡುಪಿ, ಮೇ 29: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಭಾವಚಿತ್ರದ ಬದಲು ಬಿಜೆಪಿ ಮುಖಂಡನ ಭಾವಚಿತ್ರ ಮುದ್ರಿಸಲ್ಪಟ್ಟಿದೆ!
ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಕೆ.ಕೆ.ಮಂಜುನಾಥ್ ಕುಮಾರ್ ಅವರ ಚುನಾವಣಾ ಪ್ರಚಾರ ಪತ್ರದಲ್ಲಿ ಈ ಎಡವಟ್ಟು ಕಂಡು ಬಂದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿಯ ಬದಲು ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿಯವರ ಭಾವಚಿತ್ರ ಕಂಡುಬಂದಿದೆ.
ಆರು ಪುಟಗಳ ಪ್ರಚಾರ ಪತ್ರದ ಐದನೇ ಪುಟದಲ್ಲಿ ಕಾಂಗ್ರೆಸ್ ಪಕ್ಷದ ಹಲವು ನಾಯಕರ ಫೋಟೋಗಳನ್ನು ಮುದ್ರಿಸಲಾಗಿದ್ದು, ಇದರಲ್ಲಿ ಬಿಜೆಪಿ ಮುಖಂಡ ಉದಯಕುಮಾರ್ ಶೆಟ್ಟಿಯವರ ಫೋಟೋ ಕೂಡ ರಾರಾಜಿಸುತ್ತಿದೆ.
ಇದು ಗೂಗಲ್ ನಲ್ಲಿ ಸರ್ಚ್ ಮಾಡಿ ಫೋಟೋ ಹಾಕಿದ್ದರಿಂದ ಆಗಿರುವ ದೋಷ ಎಂದು ತಿಳಿದು ಬಂದಿದೆ. ಉದಯಕುಮಾರ್ ಶೆಟ್ಟಿ ಫೋಟೋ ಇರುವ ಸಾವಿರಾರು ಪ್ರಚಾರ ಪತ್ರಗಳನ್ನು ಈಗಾಗಲೇ ಮುದ್ರಿಸಿ ಹಂಚಲಾಗಿದೆ.