ಆಯುರ್ವೇದ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ: ಉಡುಪಿ ಅಪರ ಜಿಲ್ಲಾಧಿಕಾರಿ
ಉಡುಪಿ, ನ.10: ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಗಳ ವಿರುದ್ಧ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಚಿಕಿತ್ಸೆ ಹಾಗೂ ಔಷಧಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದ್ದಾರೆ.
ಶುಕ್ರವಾರ ನಗರದ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಇವರ ಸಹಯೋಗದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದವು ಆಧುನಿಕ ಕಾಲದಲ್ಲೂ ಪ್ರಸ್ತುತವಾಗಿರುವ ಔಷಧ. ಇದು ಅತ್ಯಂತ ಪುರಾತನ ಆರೋಗ್ಯ ವ್ಯವಸ್ಥೆಯಾ ಗಿದ್ದು, ರೋಗಗಳ ತಡೆಗಟ್ಟುವಿಕೆ ಹಾಗೂ ಆರೋಗ್ಯ ವೃದ್ಧಿ ಆಯುರ್ವೇದದ ಮುಖ್ಯ ಗುರಿಯಾಗಿದೆ ಎಂದರು.
ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು 2016ರಿಂದ ಆಯುಷ್ ಇಲಾಖೆ ಆಚರಿಸಿಕೊಂಡು ಬರುತ್ತಿದೆ. ಆಯುರ್ವೇದವು ಆಹಾರ, ಯೋಗ, ಗಿಡಮೂಲಿಕೆ ಚಿಕಿತ್ಸೆ ಇತ್ಯಾದಿಯನ್ನು ಒಳಗೊಂಡಂತೆ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿದೆ. ಸರಕಾರಿ ಆಯುರ್ವೇದಿಕ್ ಆಸ್ಪತ್ರೆಗಳ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಉತ್ತಮ ಚಿಕಿತ್ಸೆ ನೀಡಲು ಆಯುಷ್ ವೈದ್ಯಾಧಿಕಾರಿಗಳು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ 8ನೇ ರಾ. ಆಯುರ್ವೇದ ದಿನಾಚರಣೆಯನ್ನು ‘ಪ್ರತಿದಿನ ಪ್ರತಿಯೊಬ್ಬರಿಗೂ ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ’ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ ಎಂದರು.
ತಜ್ಞ ವೈದ್ಯರಾದ ಡಾ.ಶ್ರೀಧರ್ ಬಾಯರಿ ಆಯುರ್ವೇದ ಚಿಕಿತ್ಸೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಆಯುಷ್ ಫೆಡರೇಷನ್‌ನ ಜಿಲ್ಲಾ ಅಧ್ಯಕ್ಷ ಡಾ.ನಾರಾಯಣ್ ಅಂಚನ್, ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉತ್ತಮವಾಗಿ ಧನ್ವಂತರಿ ಆರೋಗ್ಯ ವನಗಳನ್ನು ನಿರ್ಮಿಸಿದ ವಿವಿಧ ಶಾಲೆಗಳ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ಡಾ. ವೀಣಾ ಕಾರಂತ ನಿರೂಪಿಸಿ, ಶ್ಯಾಮರಾವ್ ವಂದಿಸಿದರು.