×
Ad

ಅಂಬಾತನಯ ಮುದ್ರಾಡಿ ಸಂಸ್ಮರಣೆಯ ನಾಟಕರಂಗದ ಪ್ರಶಸ್ತಿಗಾಗಿ ಕೃತಿಗಳಿಗೆ ಆಹ್ವಾನ

Update: 2023-08-30 20:54 IST

ಉಡುಪಿ, ಆ.30: ರಂಗಭೂಮಿ ಉಡುಪಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ಹಿರಿಯ ಸಾಹಿತಿ ದಿ|ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ನಾಟಕ ರಂಗಕ್ಕೆ ಸಂಬಂಧಿಸಿದ ಕೃತಿಗಳಿಗೆ ಪ್ರಾಶಸ್ತಿ ನೀಡುವ ಯೋಜನೆ ಆರಂಭಿಸ ಲಾಗಿದೆ ಎಂದು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ಅಂಬಾತನಯ ಮುದ್ರಾಡಿ ಹೆಸರಿನ ಪ್ರಶಸ್ತಿ ಪುರಸ್ಕಾರವನ್ನು ಈ ವರ್ಷದಿಂದ ಅನುಷ್ಠಾನಕ್ಕೆ ತರಲಾಗುತ್ತಿದೆ. ರಂಗಭೂಮಿಗೆ ಪ್ರಸ್ತುತವಾಗಿರುವ ವಿಚಾರ, ಗಂಭೀರ ಚಿಂತನೆ, ನಾಟಕೇತರ ಸಾಹಿತ್ಯ ಕೃತಿಯನ್ನು ಪರಿಗಣಿಸಲಾಗುತ್ತದೆ. ಅತ್ಯುತ್ತಮ ನಾಟಕ, ನಾಟಕೇತರ ಕೃತಿಯನ್ನು ಸ್ಪರ್ಧೆಯ ಮೂಲಕ ಗುರುತಿಸಿ ಪುರಸ್ಕಾರ ನೀಡಲಾಗುವುದು. ಇದಕ್ಕಾಗಿ ಪ್ರಮುಖ ಲೇಖಕರು, ಸಾಹಿತಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದರು.

ಪ್ರಶಸ್ತಿ ಸಮಿತಿ ಸಂಚಾಲಕ ರಮೇಶ್ ಭಟ್ ಬೆಳಗೋಡು ಮಾತನಾಡಿ, 2023ನೇ ಸಾಲಿನ ಪ್ರಶಸ್ತಿಗೆ 2021-22ರ ಅವಧಿಯಲ್ಲಿ ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ನಾಟಕೇತರ ಸಾಹಿತ್ಯ ಕೃತಿ. 2024ನೇ ಸಾಲಿನಲ್ಲಿ ನಾಟಕ ಕೃತಿಯನ್ನು ಪರಿಗಣಿಸುವ ಮೂಲಕ ನಿರಂತರವಾಗಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

2021-22ರ ಒಳಗೆ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗುತ್ತಿದ್ದು, ಬೆಳಗೋಡು ರಮೇಶ್ ಭಟ್, ‘ಭಾಗೀರಥಿ’ ಇಂದ್ರಾಳಿ, ದೇವಸ್ಥಾನ ರಸ್ತೆ, ಕುಂಜಿಬೆಟ್ಟು ಅಂಚೆ, ಉಡುಪಿ 576102 ವಿಳಾಸಕ್ಕೆ ಅ.31ರ ಒಳಗೆ ಕಳುಹಿಸಿಕೊಡಬೇಕು. ಮಾಹಿತಿಗೆ 9341091821ಗೆ ಸಂಪರ್ಕಿಸ ಬಹುದು. ಡಿಸೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, 15 ಸಾವಿರ ರೂ., ನಗದು ಬಹುಮಾನ ಒಳಗೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷ ಭಾಸ್ಕರ್‌ರಾವ್ ಕಿದಿಯೂರು, ಸಮಿತಿ ಪ್ರಮುಖರಾದ ಪ್ರಭಾಕರ್ ಜಿ.ಪಿ., ಭುವನ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News