×
Ad

ಪರ್ಕಳ ಕೆರೆದಂಡೆ ಕುಸಿತ: ಉಡುಪಿ ಜಿಲ್ಲಾಧಿಕಾರಿಯಿಂದ ಪರಿಶೀಲನೆ

Update: 2024-06-30 18:16 IST

ಪರ್ಕಳ: ಮೊದಲ ಮಳೆಗೆ ಕುಸಿದ ಪರ್ಕಳ ಶ್ರೀಮಾಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಎದುರಿನ ಕೆರೆಯ ಕಾಮಗಾರಿಯನ್ನು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಸಣ್ಣ ನೀರಾವರಿ ಇಲಾಖೆಯಿಂದ ಬಹುಕೋಟಿ ಅನುದಾನದಲ್ಲಿ ನಿರ್ಮಾಣ ವಾಗುತ್ತಿರುವ ಈ ಕೆರೆಯ ದಂಡೆ ಇದೀಗ ನಾಲ್ಕನೇ ಬಾರಿ ಕುಸಿದಿದ್ದು, ಇದಕ್ಕೆ ಅವೈಜ್ಞಾನಿಕದ ವಿನ್ಯಾಸ ಹಾಗೂ ಕಾಮಗಾರಿಯ ಗುಣಮಟ್ಟ ಕಳಪೆ ಆಗಿರುವುದು ಕಾರಣ ಎಂದು ಸ್ಥಳೀಯರು ಜಿಲ್ಲಾಧಿಕಾರಿಯವರಲ್ಲಿ ಆರೋಪಿಸಿದರು.

ಕೆರೆಯ ಅಕ್ಕಪಕ್ಕದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ತೋಡನ್ನು ನಿರ್ಮಾಣ ಮಾಡಿಲ್ಲ. ಅಲ್ಲದೆ ಈ ಬಾರಿ ಕೆರೆಯ ಪಕ್ಕದಲ್ಲಿ ಯಥೇಚ್ಛವಾಗಿ ಶೇಡಿಮಣ್ಣನ್ನು ತೆಗೆಯಲಾಗಿದೆ ಹಾಗೂ ಇಲ್ಲಿನ ಅನೇಕ ಮರಗಳನ್ನು ಕಡಿಯಲಾಗಿದೆ. ಇದರ ಪರಿಣಾಮ ಕೆರೆಯ ಸಮೀಪ ಮಣ್ಣು ಸವೇತ ಆಗಿದೆ ಎಂದು ಸ್ಥಳೀಯರು ದೂರಿದರು.

ಈ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಸುರತ್ಕಲ್ ಎನ್‌ಐಟಿಕೆ ಇಂಜಿನಿಯರ್‌ಗಳನ್ನು ಕರೆಸಿ ಅವರ ಮೂಲಕ ಕೆರೆ ನಿರ್ಮಾಣದ ವಿನ್ಯಾಸದ ವರದಿ ಪಡೆದುಕೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖಾಧಿಕಾರಿಗಳು ಹಾಜರಿದ್ದರು.

‘ಈ ಕೆರೆ ಕಾಮಗಾರಿಯಲ್ಲಿ ಯಾವುದೇ ಕಳಪೆ ಆಗಿಲ್ಲ. ನಿರ್ಮಾಣ ವಿನ್ಯಾಸ ಸರಿಯಾಗದೆ ಇರುವುದೇ ಈ ಕೆರೆ ಕುಸಿತಕ್ಕೆ ಕಾರಣವಾಗಿದೆ. ಒಂಭತ್ತು ಅಡಿ ಆಳದ ಈ ಕೆರೆಯನ್ನು ಸ್ಥಳೀಯರ ಒತ್ತಾಯದ ಮೇರೆಗೆ ೧೬ ಅಡಿ ಆಳ ಮಾಡಲಾಯಿತು. ಆದರೆ ಹಣ ಬಿಡುಗಡೆಯಾಗಿರುವುದು ಕೇವಲ ೯ ಅಡಿ ಯಿಂದ ಮೇಲೆ ಕಲ್ಲು ಕಟ್ಟಲು. ಹಾಗಾಗಿ ವಿನ್ಯಾಸ ಕೂಡ ಸರಿಯಾಗಿ ಮಾಡಲು ಆಗಿಲ್ಲ. ಅದಕ್ಕಾಗಿ ಮೇಲೆಯಿಂದಲೇ ಕಲ್ಲು ಕಟ್ಟಲಾಗಿದೆ. ಅದು ಮಳೆಗೆ ನಿಲ್ಲದೆ ಕುಸಿದು ಬಿದ್ದಿದೆ. ಕೆಳಗೆಯಿಂದಲೇ ಕಲ್ಲು ಕಟ್ಟುಕೊಂಡು ಬಂದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ’ ಎಂದು ಜಿಲ್ಲಾಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

‘ಇಲ್ಲಿನ ಮಣ್ಣು ಕೂಡ ತುಂಬಾ ನಯವಾಗಿದ್ದು, ಆದುದರಿಂದ ಈ ಕೆರೆ ಯನ್ನು ಸ್ಪೋಪ್ ಆಗಿ ನಿರ್ಮಿಸಬೇಕಾಗಿತ್ತು. ಆದರೆ ದೇವಳದ ಕೆರೆಯಲಾಗಿ ರುವುದರಿಂದ ಆ ರೀತಿ ನಿರ್ಮಿಸಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ಕೂಡ ಬೆಂಗಳೂರಿನಿಂದ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಆ ಬಳಿಕ ಯಾವ ರೀತಿ ಕಾಮಗಾರಿ ನಡೆಸಬೇಕು ಎಂಬುದರ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ದುರ್ಗನಗರದಲ್ಲಿ ಮತ್ತೊಂದು ಕೆರೆ ಕುಸಿತ!

ಪರ್ಕಳದ ದುರ್ಗಾನಗರ ಬಳಿ ಸುಮಾರು 50 ಸೆಂಟ್ಸ್ ಸರಕಾರಿ ಭೂಮಿ ಯಲ್ಲಿರುವ ಕೆರೆಯನ್ನು ಇದೀಗ ಉಡುಪಿ ನಗರಸಭೆ ಮತ್ತು ಉಡುಪಿ ನಗರಭಾವೃದ್ಧಿ ಪ್ರಾಧಿಕಾರದಿಂದ 63ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದು, ಅದೇ ರೀತಿ ಇನ್ನೊಂದು ಕಡೆ ಹೆರ್ಗ ಗ್ರಾಮದಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ದಿ ಕಾರ್ಯ ನಡೆದಿದೆ.

ಆದರೆ ಈ ಕೆರೆ ಉದ್ಘಾಟನೆಗೆ ಮೊದಲೇ ಕುಸಿದು ಇದೀಗ ಪ್ಲಾಸ್ಟಿಕ್ ಹಾಕುವ ಪರಿಸ್ಥಿತಿ ಉದ್ಭವಿಸಿದೆ. ಆದುದರಿಂದ ಈ ಕೆರೆಯ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಸ್ಥಳೀಯ ನಗರಸಭೆಯ ಜನಪ್ರತಿನಿಧಿ ಹಾಗೂ ಶಾಸಕರು ಈ ಕಡೆ ಗಮನಸಹರಿಸಬೇಕು. ಈ ಕೆರೆಯ ಕುಸಿತ ಕಾಣದಂತೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News