ಮತೀಯ ಸಾಮರಸ್ಯಕ್ಕಾಗಿ ಎಲ್ಲ ಸಮುದಾಯಗಳ ಶ್ರಮ ಅಗತ್ಯ: ಅಬ್ದುಸ್ಸಲಾಮ್ ಪುತ್ತಿಗೆ
ಉಡುಪಿ: ಭಾರತದ ಮಿಶ್ರ ಸಮಾಜದಲ್ಲಿ ಏಕತೆಯ ಅಗತ್ಯ ಸಾಕಷ್ಟು ಇದೆ. ಅದಕ್ಕಾಗಿ ಕೆಲಸ ಮಾಡುವುದು ಕೇವಲ ಒಂದು ಸಮಾಜದ ಜವಾಬ್ದಾರಿ ಅಲ್ಲ. ಸಮಾಜದಲ್ಲಿ ಸೌಹಾರ್ದ ಮೂಡಿಸುವುದು ಕೇವಲ ಅಲ್ಪಸಂಖ್ಯಾತರ ಕೆಲಸ ಅಲ್ಲ. ಸೌಹಾರ್ದ ಎಲ್ಲರ ಅಗತ್ಯವಾಗಿದೆ. ಸೌಹಾರ್ದ ಇಲ್ಲದೆ ಆಗುವ ನಷ್ಟವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ. ಆದುದ ರಿಂದ ಮತೀಯ ಸಾಮರಸ್ಯಕ್ಕಾಗಿ ಎಲ್ಲ ಸಮುದಾಯಗಳು ಜೊತೆಯಾಗಿ ಶ್ರಮಿಸಬೇಕಾಗಿದೆ ಎಂದು ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿ ಅಮೃತ ಗಾರ್ಡನ್ ನಲ್ಲಿ ರವಿವಾರ ಆಯೋಜಿಸಿದ್ದ ‘ಇಸ್ಲಾಮ್, ಮುಸ್ಲಿಮರು ಮತ್ತು ಭಾರತೀಯ ಸಮಾಜ’ ಕುರಿತು ಸ್ನೇಹ ಸಂವಾದ ಕಾರ್ಯಕ್ರಮದಲ್ಲಿ ಅವರು ವಿಚಾರ ಮಂಡಿಸಿ ಮಾತನಾಡುತ್ತಿದ್ದರು.
ಸೌಹಾರ್ದ ಸಮಾಜ ಸಾಧ್ಯವಾಗಬೇಕಾದರೆ ಎಲ್ಲರಲ್ಲೂ ಭದ್ರತೆ ಭಾವನೆ ಮೂಡಿಬರಬೇಕು. ಅಭದ್ರತೆ ಭಾವನೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಸಂವಿಧಾನದ ಹಿರಿಮೆಯನ್ನು ಒಪ್ಪಿಕೊಂಡು ಇನ್ನೊಬ್ಬರಿಗೆ ಹಾನಿಯಾಗದ ನಂಬಿಕೆ ಯನ್ನು ಪಾಲಿಸಿ ಬದುಕು ನಡೆಸಬೇಕು ಎಂದ ಅವರು, ಇವತ್ತು ನಡೆಯುವ ಸಂಘರ್ಷದ ವಿಚಾರಕ್ಕೂ ಬದುಕಿಗೂ ಯಾವುದೇ ಸಂಬಂಧ ಇಲ್ಲ. ಬೆಲೆ ಏರಿಕೆಯಂತಹ ಸಮಸ್ಯೆಗಳ ವಿರುದ್ಧ ನಾವು ಚಳವಳಿ ಮಾಡಿ ಬೀದಿಗೆ ಇಳಿಯಬೇಕಾಗಿದೆ ಎಂದರು.
ಮುಸ್ಲಿಮರು ಹೊರಗಿನಿಂದ ಬಂದರಲ್ಲ. ಈ ನೆಲದಲ್ಲಿಯೇ ಹುಟ್ಟಿ, ದೇಶವನ್ನು ಪ್ರೀತಿಸುವವರು. ಅವರಿಗೆ ದೇಶಪ್ರೇಮವನ್ನು ಬೋಧಿಸುವ ಅಗತ್ಯ ಇಲ್ಲ. ಅದೇ ರೀತಿ ಮುಸ್ಲಿಮರು ಕೂಡ ತಮ್ಮಲ್ಲಿರುವ ದೇಶಪ್ರೇಮವನ್ನು ಸಾಬೀತುಪಡಿಸುವ ಅಗತ್ಯ ಕೂಡ ಇಲ್ಲ. ಹಿಂದಿನ ರಾಜರು ಮಾಡಿರುವ ತಪ್ಪಿಗೆ ಅವರೊಂದಿಗೆ ಯಾವುದೇ ಸಂಬಂಧ ಇಲ್ಲದ ಮುಸ್ಲಿಮರು ಈಗ ಉತ್ತರ ಕೊಡಬೇಕಾದ ಅಗತ್ಯ ಇಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಭಾರತ ದೇಶದ ಆರ್ಥಿಕ, ಸಾಂಸ್ಕೃತಿಕ, ಶಿಕ್ಷಣ, ರಾಜಕೀಯ ಸೇರಿದಂತೆ ಸರ್ವತೋಮುಖ ಬೆಳವಣಿಗೆಗೆ ಇಸ್ಲಾಮ್ ಧರ್ಮ ಅಪಾರ ಕೊಡುಗೆ ನೀಡಿದೆ. ಆದುದರಿಂದ ಈ ದೇಶದ ಅಭಿವೃದ್ಧಿಗೆ ಧರ್ಮಗಳು ನೀಡಿದ ಕೊಡುಗೆಯನ್ನು ಚರ್ಚಿಸುವ ಅಗತ್ಯ ಇಂದು ಎದುರಾಗಿದೆ. ನಾವು ಶಿಕ್ಷಣ, ಅಭಿವೃದ್ಧಿಯತ್ತ ಒತ್ತು ಕೊಟ್ಟು ದೇಶವನ್ನು ಮುನ್ನಡೆಸಿದರೆ ಮಾತ್ರ ಭಾರತ ಇಡೀ ಜಗತ್ತಿನಲ್ಲೇ ನಂಬರ್ ಒನ್ ದೇಶವಾಗಲು ಸಾಧ್ಯ ಎಂದರು.
ಉಡುಪಿ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿಕೇತನ ಮಾತನಾಡಿ, ನಮ್ಮ ಒಳಗಿನ ವ್ಯಕ್ತಿ ಪ್ರಜ್ಞೆಯು ಸಮಾಜದ ಜೊತೆ ವಿವಿಧತೆ ಏಕತೆಯನ್ನು ಕಾಣುತ್ತ ಸೌಹಾರ್ದಲ್ಲಿ ಬದುಕಬೇಕಾದರೆ ಧರ್ಮಗಳ ವಿಚಾರದ ಕುರಿತು ಮುಕ್ತವಾಗಿ ಚರ್ಚೆ ಮಾಡಬೇಕಾಗಿದೆ. ನಮ್ಮದು ಎಲ್ಲರೊಳಗೆ ಒಂದಾಗುವ ಸಂಸ್ಕೃತಿ. ಪ್ರೀತಿ ಎಲ್ಲರನ್ನು ಜೋಡಿಸಿದರೆ, ದ್ವೇಷ ಮತ್ತು ಭಯ ಎಲ್ಲರನ್ನು ವಿಘಟನೆ ಮಾಡುತ್ತದೆ ಎಂದರು.
ನಮ್ಮನ್ನು ನಾವು ಮೊದಲು ಅರ್ಥ ಮಾಡಿಕೊಳ್ಳುವಲ್ಲಿ ಧರ್ಮಗಳ ಪಾತ್ರ ಪ್ರಮುಖವಾಗಿದೆ. ಎಲ್ಲ ಧರ್ಮಗಳ ಬೋಧನೆ ಹಿಂದೆ ಪ್ರೀತಿ, ಮಾನವೀಯತೆ ಹಂಚುವುದು ಮತ್ತು ಪ್ರತಿಯೊಬ್ಬರು ಸಹಕಾರ ಮನೋಭಾವನೆಯಿಂದ ಒಟ್ಟಾಗಿ ಬದುಕಾಗಿದೆ ಎಂದವರು ಅಭಿಪ್ರಾಯ ಪಟ್ಟರು.
ದಸಂಸ ಅಂಬೇಡ್ಕರ್ ವಾದ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಸಹಬಾಳ್ವೆ ಸಂಚಾಲಕ ಪ್ರೊ.ಫಣಿರಾಜ್, ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಅಭಿಪ್ರಾಯ ಮಂಡಿಸಿದರು.
ಮೌಲಾನ ಝಮೀರ್ ಅಹ್ಮದ್ ರಶಾದಿ ಸಮಾರೋಪ ಭಾಷಣ ಮಾಡಿದರು. ಹಾಫಿಝ್ ಯೂನುಸ್ ಕಿರಾಅತ್ ಪಠಿಸಿ ದರು. ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಟ ಸ್ವಾಗತಿಸಿದರು. ಅನ್ವರ್ ಅಲಿ ಕಾಪು ವಂದಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.