×
Ad

Kapu | ಕೋತಲ್‌ಕಟ್ಟೆ ರಸ್ತೆ ಅಪಘಾತ ಪ್ರಕರಣ|ನಾಲ್ಕು ಮೃತದೇಹಗಳ ಮರಣೋತ್ತರ ಪರೀಕ್ಷೆ: ಕುಟುಂಬಸ್ಥರಿಗೆ ಹಸ್ತಾಂತರ

Update: 2025-12-01 21:44 IST

ಕಾಪು: ಉಳಿಯಾರಗೋಳಿ ಗ್ರಾಮದ ಕೋತಲ್‌ಕಟ್ಟೆ ಎಂಬಲ್ಲಿ ರವಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಐವರ ಪೈಕಿ ನಾಲ್ಕು ಕುಟುಂಬದವರು ಉಡುಪಿಗೆ ಆಗಮಿಸಿದ್ದು, ನಾಲ್ಕು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಡಿ.2 ರಂದು ಮತ್ತೊಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಅವರ ಕುಟುಂಬದವರು ಬಂದಾಗ ಆ ಮೃತದೇಹವನ್ನು ಅವರಿಗೆ ಹಸ್ತಾಂತರ ಮಾಡಲಾಗುತ್ತದೆ. ಡೆಕರೋಟ್ ಕಂಪನಿಯ ಮಾಲಕರು ಮೃತದೇಹಗಳನ್ನು ವಿಮಾನದ ಮೂಲಕ ಕೊಂಡೊಯ್ಯಲು ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಏಳು ಮಂದಿ ಗಾಯಾಳುಗಳ ಪೈಕಿ ಇಬ್ಬರು ಗಂಭೀರ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಾಯದಿಂದ ಪಾರಾದರೂ ಈಗಲೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಚಾಲಕ ಮಾಲಕರ ವಿರುದ್ಧ ಪ್ರಕರಣ:

ಕಾಪುವಿನ ಪ್ರಸನ್ನ ಶೆಟ್ಟಿ ಎಂಬವರ ಡೆಕೊರೇಶನ್ ಸೆಟ್ಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು, ಕಾಪುವಿನ ಬೀಚ್‌ನಲ್ಲಿ ಕೆಲಸ ಮುಗಿಸಿ, ಮಲ್ಪೆಯ ಶೀಯಾ ಬೀಚ್‌ನಲ್ಲಿ ಡೆಕೊರೇಶನ್ ಕೆಲಸಕ್ಕೆ ಟೆಂಪೊದಲ್ಲಿ ಹೊರಟಿದ್ದರು. ಟೆಂಪೊ ಚಾಲಕ ರಂಜಿತ್ ವಾಹನವನ್ನು ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿರುವ ಡಿವೈಡರ್‌ಗೆ ಹತ್ತಿಸಿದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

ಇದರಿಂದ ವಾಹನದಲ್ಲಿದ್ದ 12 ಮಂದಿ ಗಾಯಗೊಂಡಿದ್ದು, ಅವರ ಪೈಕಿ ಅಸ್ಸಾಂ ರಾಜ್ಯದ ಪಪ್ಪು ರವಿದಾಸ್, ಹರೀಶ್, ತ್ರಿಪುರಾದ ಗಪುನಾಥ್, ಪಶ್ಚಿಮ ಬಂಗಾಳ ರಾಜ್ಯದ ಕಮಲ್, ಸಮರೇಶ್ ಎಂಬವರು ಮೃತಪಟ್ಟಿದ್ದಾರೆ. ಉಳಿದಂತೆ ಏಳು ಮಂದಿ ಗಾಯಗೊಂಡಿದ್ದರು. ಇವರೆಲ್ಲರೂ ಉತ್ತರ ಭಾರತದ ಕೂಲಿ ಕಾರ್ಮಿಕರಾಗಿದ್ದಾರೆ.

ಈ ಅಪಘಾತಕ್ಕೆ ಚಾಲಕ ರಂಜಿತ್‌ನ ನಿರ್ಲಕ್ಷತನದ ಚಾಲನೆಯೇ ಕಾರಣ ಎಂದು ಆರೋಪಿಸಲಾಗಿದ್ದು, ರಂಜಿತ್ ಮತ್ತು ಟೆಂಪೊ ಮಾಲಕ ಪ್ರಸನ್ನ ಶೆಟ್ಟಿ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News