×
Ad

ಕರ್ನಾಟಕ ರಾಜ್ಯಕ್ಕೆ ಗ್ರಾಮಸಡಕ್ ರಸ್ತೆ ಮಂಜೂರಾತಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಭರವಸೆ : ಸಂಸದ ಕೋಟ

Update: 2025-12-03 19:36 IST

ಉಡುಪಿ, ಡಿ.3: ಕರ್ನಾಟಕ ರಾಜ್ಯಕ್ಕೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆ ಮಂಜೂರು ಮಾಡುವಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವಾನ್ ಭರವಸೆ ನೀಡಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಚಿವ ಕಮಲೇಶ್, ಪ್ರಸ್ತುತ ಕಾರ್ಯಕ್ರಮದ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದಂತೆ ಗೊತ್ತು ಪಡಿಸಿದ ಜನಸಂಖ್ಯೆಯ ಅರ್ಹ ಸಂಪರ್ಕವಿಲ್ಲದ ವಾಸ ಸ್ಥಳಗಳಿಗೆ ಸರ್ವಋತು ರಸ್ತೆಯ ಮೂಲಕ ಗ್ರಾಮೀಣ ಸಂಪರ್ಕವನ್ನು ಒದಗಿಸಲು ಪಿಎಂಜಿಎಸ್ವೈ ರಸ್ತೆಗಳನ್ನು ಆರಂಭಿಸಲಾಗಿದೆ ಎಂದು ವಿವರಿಸಿದ್ದಾರೆ.

ಯೋಜನೆಯ ಒಂದು, ಎರಡು, ಮೂರನೇ ಹಂತದ ಮಂಜೂರಾತಿಯ ಕಾರ್ಯಕ್ರಮ ಮುಗಿದಿದ್ದರೂ, 2011ರ ಜನಗಣತಿಯಂತೆ ನಿಗದಿತ ಜನ ವಸತಿ ಪ್ರದೇಶಗಳಿಗೆ 2029ರ ಮಾರ್ಚ್ ಗೆ ಪೂರ್ಣಗೊಳಿಸುವ ಸಂಕಲ್ಪದೊಂದಿಗೆ ರಾಜ್ಯಗಳಿಂದ ಅನುಮೋದನೆ ಪಡೆದು ಮಂಜೂರಾತಿ ಮಾಡಲಾಗುವುದು ಎಂದು ಕೇಂದ್ರ ಸಚಿವರು ಸಂಸದರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಕೇಂದ್ರ ಸರಕಾರ ರಾಜ್ಯ ಸರ್ಕಾರದ ಜೊತೆ ಸಮನ್ವಯ ಸಾಧಿಸುತ್ತಿದ್ದು, ರಾಜ್ಯದಿಂದ ಪ್ರಸ್ತಾವನೆಯನ್ನು ಪಡೆಯಲಾಗುತ್ತಿದೆ. ಇಲ್ಲಿಯವರೆಗೆ ಕರ್ನಾಟಕ ರಾಜ್ಯಕ್ಕೆ 24,267.78 ಕಿ.ಮೀ ರಸ್ತೆ ಮಂಜೂರು ಮಾಡಿದ್ದು, 23,971.94 ಕಿ.ಮೀ ರಸ್ತೆ ಪೂರ್ಣಗೊಳಿಸಲಾಗಿದೆ. ಇದರ ವೆಚ್ಚ ರಾಜ್ಯ ಸರಕಾರದ ಪಾಲು ಸೇರಿದಂತೆ 8426.74 ಕೋಟಿ ರೂ. ಆಗಿದ್ದು ಪ್ರಗತಿಯನ್ನಾಧರಿಸಿ ಹಂತ ಹಂತವಾಗಿ ಹಣ ಬಿಡುಗಡೆಗೊಳ್ಳುತ್ತದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ರಾಜ್ಯದಿಂದ ಬರುವ ಪ್ರಸ್ತಾಪನೆಗಳನ್ನು ಸ್ವೀಕರಿಸಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ ಪಾಸ್ವಾನ್ ತಿಳಿಸಿದ್ದಾರೆ ಎಂದು ಸಂಸದ ಕೋಟ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News