ಕಾಪು: ಉಡುಪಿ ಜಿಲ್ಲೆಯ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಹಾಗೂ ಕಡಲತೀರಗಳ ಜೊತೆಗೆ ಇಲ್ಲಿನ ಗ್ರಾಮೀಣ ಬದುಕು, ಕೃಷಿ ಚಟುವಟಿಕೆಗಳು, ವಿಶಿಷ್ಟ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ಪ್ರವಾಸೋದ್ಯಮದೊಂದಿಗೆ ಬೆಸೆಯುವ ಮೂಲಕ ಪ್ರವಾಸಿಗರಿಗೆ ವಿಭಿನ್ನ ಅನುಭವ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.

ರವಿವಾರ ಉಡುಪಿ ಪ್ರವಾಸೋದ್ಯಮ ಇಲಾಖೆ ಹಾಗೂ ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂ ಸಹಯೋಗದಲ್ಲಿ ಕಾಪುವಿನ ಪ್ಯಾಲೇಸ್ ಗಾರ್ಡನ್ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗೆ 'ಸಂಪರ್ಕಿಸಿ, ಸಹಕರಿಸಿ, ಸೃಷ್ಟಿಸಿ, ಪ್ರಚಾರ ಮಾಡಿ' ಎಂಬ ಆಶಯದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಜಾನಪದ ಕಲೆ, ಯಕ್ಷಗಾನ, ಸ್ಥಳೀಯ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ವಿಭಿನ್ನ ಪ್ರವಾಸೋದ್ಯಮ ಅನುಭವ ಕಲ್ಪಿಸಬೇಕು. ಕೃಷಿ ಪ್ರವಾಸೋದ್ಯಮದಿಂದ ಸ್ಥಳೀಯ ರೈತರು, ಗ್ರಾಮೀಣ ಉದ್ಯಮಿಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಕಲಾವಿದರಿಗೆ ಹೆಚ್ಚುವರಿ ಆರ್ಥಿಕ ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದರು.

ಪ್ರವಾಸಿಗರು ಕೇವಲ ಪ್ರವಾಸಿ ತಾಣಗಳ ವೀಕ್ಷಣೆಗೆ ಸೀಮಿತವಾಗದೆ, ಸ್ಥಳೀಯ ಗ್ರಾಮೀಣ ಜೀವನಶೈಲಿ, ಕೃಷಿ ಚಟುವಟಿಕೆಗಳು, ಆಹಾರ ಪದ್ಧತಿ ಹಾಗೂ ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ನೇರವಾಗಿ ಅನುಭವಿಸುವ ಅವಕಾಶ ಕಲ್ಪಿಸಬೇಕು. ಇದರ ಭಾಗವಾಗಿ ವಿಲೇಜ್ ವಾಕ್, ಫಾರ್ಮ್ ವಿಸಿಟ್, ಸ್ಥಳೀಯ ಆಹಾರ ಪರಿಚಯ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಗಳ ಅನುಭವ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರವಾಸೋದ್ಯಮ ಪ್ಯಾಕೇಜ್‌ಗಳಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಲ್ ಮಾತನಾಡಿ, ಸ್ಥಳೀಯ ಜನರು, ಸಂಪ್ರದಾಯಗಳು ಹಾಗೂ ಪ್ರವಾಸಿ ತಾಣಗಳೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವ ಮೂಲಕ ಉಡುಪಿಯ ನೈಜ ಕಥೆಗಳನ್ನು ಪ್ರವಾಸಿಗರಿಗೆ ಪರಿಚಯಿಸಬೇಕು. ಕಡಿಮೆ ಪರಿಚಿತ ಪ್ರವಾಸಿ ತಾಣಗಳು ಮತ್ತು ವಿಶಿಷ್ಟ ಅನುಭವಗಳನ್ನು ಅನ್ವೇಷಿಸುವ ಜೊತೆಗೆ ಕುಶಲಕರ್ಮಿಗಳು, ಮೀನುಗಾರರು, ರೈತರು ಹಾಗೂ ಸ್ಥಳೀಯ ಉದ್ಯಮಿಗಳ ಬದುಕು ಮತ್ತು ಅನುಭವಗಳನ್ನು ಪ್ರವಾಸಿಗರಿಗೆ ಪರಿಚಯಿಸಬೇಕು. ರಾಜ್ಯ ಸರ್ಕಾರವೂ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಕರಾವಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಮನೋಹರ್ ಪ್ರಸಾದ್ ಮಾತನಾಡಿ, ಕರಾವಳಿ ಉಡುಪಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಕಡಲತೀರಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣಗಳು ಮತ್ತು ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ದೇಶ-ವಿದೇಶಗಳ ಪ್ರವಾಸಿಗರಿಗೆ ಪರಿಣಾಮಕಾರಿಯಾಗಿ ಪರಿಚಯಿಸುವ ಅಗತ್ಯವಿದೆ ಎಂದರು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್.ಎಂ. ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘದ ಕಾರ್ಯದರ್ಶಿ ಗೌರವ ಶೇಣವ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor