Udupi | ತಾಯಿಯನ್ನೇ ರಸ್ತೆಬದಿಯಲ್ಲಿ ಬಿಟ್ಟು ತೆರಳಿದ ಮಗ: ಬ್ರಹ್ಮಾವರದಲ್ಲೊಂದು ಅಮಾನವೀಯ ಘಟನೆ
ಬ್ರಹ್ಮಾವರ, ಸೆ.28: ಹೆತ್ತ ತಾಯಿಯನ್ನೇ ಮಕ್ಕಳು ರಸ್ತೆ ಬದಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಬ್ರಹ್ಮಾವರ ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಬಳಿ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿದರು. ಬಳಿಕ ಅವರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು, 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ದಾಖಲು ಪ್ರಕ್ರಿಯೆ ವೇಳೆ ವೃದ್ಧೆ ತನ್ನ ಹೆಸರು ಸರಸ್ವತಿ(70) ಎಂದು ಹೇಳಿಕೊಂಡಿದ್ದು, ತಮಿಳುನಾಡಿನ ತಿರುವಳ್ಳುವೂರು ನಿವಾಸಿ ಎಂದು ತಿಳಿಸಿದ್ದಾರೆ. ತನ್ನ ಮಗ ಕಾರಿನಲ್ಲಿ ಕರೆತಂದು, ರಸ್ತೆ ಬಿಟ್ಟು ತೆರಳಿದ್ದಾನೆ ಎಂದು ಅವರು ದೂರಿದ್ದಾರೆ.
ಘಟನೆಯ ಕುರಿತು ನಿತ್ಯಾನಂದ ಒಳಕಾಡು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.