×
Ad

ಉಡುಪಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ‘ಖನಿಜ ಭವನ’ ಉದ್ಘಾಟನೆ

Update: 2025-01-31 20:05 IST

ಉಡುಪಿ: ಉಡುಪಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಹೊಯಿಗೆ (ಮರಳು) ಹಾಗೂ ಜಲ್ಲಿ ಸರಳವಾಗಿ ನಿಗದಿತ ಬೆಲೆಗೆ ಜನಸಾಮಾನ್ಯರಿಗೆ ದೊರಕುವಂತೆ ಗಣಿ ಇಲಾಖೆ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಯಶಪಾಲ್ ಎ.ಸುವರ್ಣ ಅವರು ಹೇಳಿದ್ದಾರೆ.

ನಗರದ ದೊಡ್ಡಣಗುಡ್ಡೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳ ನೂತನ ಕಚೇರಿ ‘ಖನಿಜ ಭವನ’ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ. ಅಭಿವೃದ್ಧಿ ಹೊಂದಲು ರಸ್ತೆ, ಸೇತುವೆಗಳ ನಿರ್ಮಾಣದೊಂದಿಗೆ ಜಿಲ್ಲೆಯ ಮೂಲಭೂತ ಸೌಕರ್ಯಗಳೂ ಅಭಿವೃದ್ಧಿಗೊಳ್ಳಬೇಕಾಗಿದೆ. ಇವುಗಳ ನಿರ್ಮಾಣಕ್ಕೆ ಅಗತ್ಯವಿರುವ ಹೊಯ್ಗೆ ಹಾಗೂ ಜಲ್ಲಿಗಳನ್ನು ಅಗತ್ಯಕ್ಕೆ ತಕ್ಕಂತೆ ಸಿಗುವಂತೆ ಗಣಿ ಇಲಾಖೆ ನೋಡಿಕೊಳ್ಳಬೇಕು. ಇದನ್ನು ಸುಸಜ್ಜಿತ ಹೊಸ ಕಟ್ಟಡದಲ್ಲಿ ಸಕ್ರೀಯವಾಗಿ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಣಿ ಇಲಾಖೆಯ ಅಡಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಕಲ್ಲುಗಳು, ಜೇಡಿಮಣ್ಣು, ಮೂರಕಲ್ಲು, ಮರಳು, ಸಿಲಿಕಾ ಮರಳು ಹಾಗೂ ಅಲಂಕಾರಿಕ ಶಿಲಾಕಲ್ಲುಗಳ ಒಟ್ಟು 167 ಗಣಿ ಗುತ್ತಿಗೆಗಳನ್ನು ನೀಡಲಾಗಿದೆ. ಅಲ್ಲದೇ 45ಕ್ಕೂ ಹೆಚ್ಚು ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಕಾರ್ಯಚಟುವಟಿಕೆಗಳ ನಿಯಂತ್ರಣವನ್ನು ಸಮರ್ಪಕವಾಗಿ ನಿರ್ವಹಿಸಲು ಎರಡು ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತ ವಾದ ನೂತನ ಕಟ್ಟಡವನ್ನು ನಿರ್ಮಿತಿ ಕೇಂದ್ರವಾಗಿ ಉತ್ತಮವಾಗಿ ನಿರ್ಮಿಸಿದೆ ಎಂದರು.

ಪ್ರತಿಯೊಂದು ಇಲಾಖೆಗೂ ಸ್ವಂತ ಕಚೇರಿ ಇದ್ದಾಗ ಮಾತ್ರ ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರಿಗೆ ಈ ಕಚೇರಿ ಉತ್ತಮ ರೀತಿಯಲ್ಲಿ ಸೇವೆ ನೀಡುವುದರ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಉದ್ಯಮಕ್ಕೆ ಪ್ರೋತ್ಸಾಹ ಸಿಗುವಂತಾಗಲಿ ಎಂದರು.

ಮೈಸೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ನಂಜುಂಡಸ್ವಾಮಿ ಮಾತನಾಡಿ, ಸಾರ್ವಜನಿಕರು, ಕಲ್ಲುಬಂಡೆ ಗುತ್ತಿಗೆದಾರರು, ಮರಳು ಗುತ್ತಿಗೆದಾರರು ಹೊಸ ಖನಿಜ ಭವನದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉಪಸ್ಥಿತರಿದ್ದರು. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್ ಜೆ.ಯು ಸ್ವಾಗತಿಸಿ, ವಿನೂತ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News