×
Ad

ಮಹಿಷಾಸುರ ದಲಿತರ ಮಹಾ ಅಸ್ಮಿತೆ: ಜಯನ್ ಮಲ್ಪೆ

Update: 2024-09-29 13:12 IST

ಉಡುಪಿ, ಸೆ.29: ಬ್ರಾಹ್ಮಣರ ಮತ್ತು ದಲಿತರ ನಡುವಿನ ಸಂಘರ್ಷವೇ ಭಾರತ ಇತಿಹಾಸವಾಗಿದೆ. ಮಹಿಷ ಮಂಡಲದ ಮಹಿಷಾಸುರ ನಾಡಿನ ಸಾಂಸ್ಕೃತಿಕ ನಾಯಕ ಹಾಗೂ ದಲಿತರ ಮಹಾ ಅಸ್ಮಿತೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ರವಿವಾರ ಆಯೋಜಿಸಲಾದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿ ಮನುವಾದಿಗಳು ಪುರಾಣ ಮತ್ತು ಮಹಾಕಾವ್ಯಗಳನ್ನು ಇತಿಹಾಸವೆಂದು ಬಣ್ಣಿಸಿ ಇಲ್ಲಿನ ದಲಿತರನ್ನು ದಾರಿತಪ್ಪಿಸಿದ್ದಾರೆ. ಮಹಿಷಾಸುರನ ಪಾತ್ರವನ್ನು ಪುರಾಣಗಳು ಸೃಷ್ಟಿಸಿರುವ ಬಗೆ ಆಕ್ಷೇಪಾರ್ಹವಾದದ್ದು. ವೈದಿಕ ಸಿದ್ಧಾಂತವನ್ನು ವಿರೋಧಿಸುವವರನ್ನು ರಾಕ್ಷಸ ಎಂದು ಬಿಂಬಿಸಲಾಗಿದೆ. ಮಹಿಷಾಸುರ ರಾಕ್ಷಸನಲ್ಲ, ಆತನು ಮಹಾರಕ್ಷಕ ಎಂದು ಅವರು ತಿಳಿಸಿದರು.

ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ವೈದಿಕರು ಬಲಿ ಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ಚಿತ್ರಿಸಿದ್ದಾರೆ. ಈ ಹಿನ್ನಲೆಯಲ್ಲಿ ದಲಿತರು ಪುರಾಣವನ್ನು ತಿರಸ್ಕರಿಸಿ ಇತಿಹಾಸದ ಮರುವ್ಯಾಖ್ಯಾನಕ್ಕೆ ಮುಂದಾಗುವ ಅನಿವಾರ್ಯತೆ ಹಿಂದಿಗಿಂತ ಇಂದು ಹೆಚ್ಚಿದೆ ಎಂದರು.

ಯುವ ಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿದರು. ದಲಿತ ಮುಖಂಡರಾದ ಭಗವಾನ್, ಸತೀಶ್ ಕಪ್ಪೆಟ್ಟು, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ಸಾಧು ಚಿಟ್ಪಾಡಿ, ಸುಶೀಲ್ ಕುಮಾರ್, ರವಿರಾಜ್ ಲಕ್ಷ್ಮೀನಗರ, ವಸಂತ ಅಂಬಲಪಾಡಿ, ಸಧಾಕರ್ ನೆರ್ಗಿ, ಯೋಗೀಶ್ ಮಲ್ಪೆ, ಸುರೇಶ್ ತೊಟ್ಟಂ, ವಿನಯ ಬಲರಾಮನಗರ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪೂರ್ಣಿಮಾ ಸದಾನಂದ, ಪ್ರಮೀಳ ಹರೀಶ್, ವಿನೋಧ ಜಯರಾಜ್, ಚಿತ್ರಾಕ್ಷಿ ಕದಿಕೆ ಮುಂತಾದವರು ಉಪಸ್ಥಿತರಿದ್ದರು. ದೀಪಕ್ ಕೊಡವೂರು ಸ್ವಾಗತಿಸಿದರು. ಗುಣವಂತ ತೊಟ್ಟಂ ವಂದಿಸಿದರು.

 

‘ಈ ಬಾರಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಮಹಿಷಾಸುರನಿಗೆ ಸಾಂಕೇತಿಕವಾಗಿ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ವರ್ಷ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಹೋಬಳಿ ಮಟ್ಟದಲ್ಲಿ ಮಹಿಷಾಸುರ ದಸರಾ ಏರ್ಪಡಿಸಲಾಗುವುದು’

-ಗಣೇಶ್ ನೆರ್ಗಿ, ಅಧ್ಯಕ್ಷರು, ಅಂಬೇಡ್ಕರ್ ಯುವ ಸೇನೆ, ಉಡುಪಿ ಜಿಲ್ಲೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News