ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆ: ಉಡುಪಿ ನಗರದ ಬಹುತೇಕ ರಸ್ತೆಗಳು ಹೊಂಡಮಯ!
ಉಡುಪಿ, ಜು.22: ಉಡುಪಿ ಜಿಲ್ಲೆಯಾದ್ಯಂತ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೀಗೆ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಡುಪಿ ನಗರದ ಪ್ರಮುಖ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಕಿತ್ತು ಹೋಗಿ ಹೊಂಡ ಗುಂಡಿಗಳಿಂದ ತುಂಬಿ ಹೋಗಿವೆ. ಇದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ತೊಡಕಾಗಿದೆ.
ಮಳೆಗಾಲಕ್ಕೆ ಮೊದಲು ಬೇಸಿಗೆಯಲ್ಲಿ ಅಂದರೆ ಎರಡು ಮೂರು ತಿಂಗಳ ಹಿಂದೆಯಷ್ಟೇ ಉಡುಪಿ ನಗರ ಸಭೆಯಿಂದ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ಮಾಡ ಲಾಗಿತ್ತು. ಆದರೆ ಈ ಬಾರಿ ಸುರಿದ ನಿರಂತರ ಮಳೆಯಿಂದಾಗಿ ಇಲ್ಲಿನ ಡಾಮರುಗಳು ಕಿತ್ತು ಹೋಗಿ ಮತ್ತೆ ಹೊಂಡಮಯವಾಗಿವೆ.
ನಗರದ ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪದ ರಸ್ತೆ ಸಂಪೂರ್ಣ ಹಾಳಾಗಿದ್ದು, ಕನ್ನರ್ಪಾಡಿಯಿಂದ ಕಿನ್ನಿಮುಲ್ಕಿವರೆಗಿನ ರಸ್ತೆಯುದ್ದಕ್ಕೂ ಬೃಹತ್ ಆಕಾರದ ಹೊಂಡಗಳು ನಿರ್ಮಾಣವಾಗಿವೆ. ಈ ಬಗ್ಗೆ ವಾಹನ ಸವಾರರಿಗೆ ಅಪಾಯದ ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಸ್ಥಳೀಯರು ಹೊಂಡಕ್ಕೆ ಗಿಡಗಳನ್ನು ನೆಟ್ಟು ಸಹಕರಿಸಿದ್ದಾರೆ. ಅದೇ ರೀತಿ ಇನ್ನೊಂದು ಬದಿಯ ರಸ್ತೆಯೂ ಹದಗೆಟ್ಟಿವೆ. ಇದೇ ವಾರ್ಡ್‌ನ ಗೋವಿಂದ ಕಲ್ಯಾಣ ಮಂಟಪ ರಸ್ತೆ ಕೂಡ ಮಳೆಯಿಂದ ಸಂಪೂರ್ಣ ಹಾಳಾಗಿದೆ.
ಹೀಗೆ ನಗರದ ಜೋಡುರಸ್ತೆಯ ಜಂಕ್ಷನ್‌ನಲ್ಲಿಯೇ ದೊಡ್ಡ ಹೊಂಡ ಬಿದ್ದಿರುವುದರಿಂದ ಹಳೆ ತಾಲೂಕು ಕಚೇರಿಯಿಂದ ಬಂದ ವಾಹನಗಳು ಯೂ ಟರ್ನ್ ಮಾಡಲು ಮತ್ತು ಅಜ್ಜರಕಾಡು ರಸ್ತೆಯಿಂದ ಕೋರ್ಟ್ ರಸ್ತೆಗೆ ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಹೊಂಡದಲ್ಲಿ ನೀರು ತುಂಬಿ ರುವುದರಿಂದ ದ್ವಿಚಕ್ರ ವಾಹನ ಸವಾರರು ಅದಕ್ಕೆ ಬಿದ್ದು ನಿಯಂತ್ರಣ ಕಳೆದು ಕೊಂಡಿರುವುದು ಕಂಡುಬಂದಿದೆ.
ಅದೇ ರೀತಿ ಬ್ರಹ್ಮಗಿರಿ ಬಾಲಭವನದಿಂದ ಬನ್ನಂಜೆ ತಾಲೂಕು ಕಚೇರಿ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಕೆಸರು ನೀರಿನೊಂದಿಗೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಹೊಂಡುಗುಂಡಿಗಳಿಂದ ವಾಹನ ಸವಾರರು ಸಾಗಲು ಪದರಾಡುವಂತಾಗಿದೆ. ಇದಲ್ಲದೆ ಹಳೆ ಅಂಚೆ ಕಚೇರಿ ರಸ್ತೆ, ಕಲ್ಸಂಕ- ಗುಂಡಿಬೈಲು ರಸ್ತೆ, ಚಿಟ್ಪಾಡಿ ಹನುಮನ್ ಗ್ಯಾರೇಜ್ ರಸ್ತೆ ಒಳಕಾಡು ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿದೆ.
ಈ ಸಂಬಂಧ ಸ್ಥಳೀಯರು ಆಯಾ ವಾರ್ಡ್‌ಗಳ ಸದಸ್ಯರ ಮೊರೆ ಹೋಗಿ ರಸ್ತೆ ದುರಸ್ತಿಗೆ ಆಗ್ರಹಿಸುತ್ತಿ ದ್ದಾರೆ. ಈ ನಿಟ್ಟಿನಲ್ಲಿ ಆಯಾ ವಾರ್ಡ್‌ನ ಸದಸ್ಯರು ಅಧಿಕಾರಗಳ ಬೆನ್ನು ಬಿದ್ದಿದ್ದಾರೆ. ಆದರೆ ನಿರಂತರ ವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ದುರಸ್ತಿ ಕಾರ್ಯವೂ ಸಾಧ್ಯ ವಾಗುತ್ತಿಲ್ಲ. ಮಳೆಯಿಂದಾಗಿ ರಸ್ತೆಗಳು ಹಾಳಾಗಿ ನಗರಸಭೆಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ನಷ್ಟವಾಗಿದೆ. ಇದರ ಅಂದಾಜುಪಟ್ಟಿಯನ್ನು ತಯಾರಿಸಲಾಗುತ್ತಿದೆ. ಆಯಾ ವಾರ್ಡ್‌ಗಳ ಸದಸ್ಯರು, ಸಾರ್ವಜನಿಕರು ಕೂಡ ರಸ್ತೆ ಹಾಳಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅದೇ ರೀತಿ ನಾವು ಕೂಡ ಗುಂಡಿ ಬಿದ್ದ ರಸ್ತೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದೆ. ಮಳೆ ನಿಂತು ಬಿಸಿಲು ಬಿಟ್ಟ ಕೂಡಲೇ ಆ ರಸ್ತೆಗಳ ದುರಸ್ತಿ ಕಾರ್ಯ ಮಾಡಲಾಗುವುದು"
-ಮಹಾಂತೇಶ್ ಹಂಗರಗಿ, ಪೌರಾಯುಕ್ತರು, ಉಡುಪಿ ನಗರಸಭೆ.
"ಮಳೆಯಿಂದ ಕಿನ್ನಿಮುಲ್ಕಿ ವಾರ್ಡ್‌ನಲ್ಲಿ ಬಹುತೇಕ ರಸ್ತೆಗಳು ತುಂಬಾ ಹಾಳಾಗಿದೆ. ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದಕ್ಕೆ ಕೂಲ್ ಟಾರ್ ಹಾಕಲು ಟೆಂಡರ್ ಕರೆಯಲಾಗುತ್ತಿದೆ. ಯಾವುದಕ್ಕೂ ಮೊದಲು ಮಳೆಗೆ ವಿರಾಮ ಸಿಗಬೇಕಾಗಿದೆ. ಮಳೆ ಬಿಟ್ಟ ಕೂಡಲೇ ಈ ಕಾರ್ಯ ನಡೆಸಲಾಗುತ್ತದೆ"
-ಅಮೃತಾ ಕೃಷ್ಣಮೂರ್ತಿ, ಸದಸ್ಯರು ಕಿನ್ನಿಮುಲ್ಕಿ ವಾರ್ಡ್, ನಗರಸಭೆ
ರಾ.ಹೆದ್ದಾರಿಯುದ್ದಕ್ಕೂ ಹೊಂಡಗುಂಡಿಗಳು!
ಕಳೆದ 10ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇತ್ತೀಚೆಗೆ ಮರು ಡಾಮರೀಕರಣ ಮಾಡಿರುವ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 66ರ ಬಹುತೇಕ ಕಡೆಗಳಲ್ಲಿ ಹೊಂಡಗಳು ಬಿದ್ದಿವೆ.
ಹೆಜಮಾಡಿಯಿಂದ ಕುಂದಾಪುರವರೆಗಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿ ನೀರು ನಿಲ್ಲುವ ಸ್ಥಳಗಳ ಲ್ಲಿಯೇ ಹೆಚ್ಚಿನ ಗುಂಡಿಗಳು ಕಾಣಿಸಿವೆ. ಪಡುಬಿದ್ರಿ, ಎರ್ಮಾಳು, ಉದ್ಯಾವರ, ಕಟಪಾಡಿ, ನಿಟ್ಟೂರು, ಕುಂದಾಪುರ ಭಾಗಗಳಲ್ಲಿ ಬಹುತೇಕ ಹೆದ್ದಾರಿ ಹಾಳಾಗಿವೆ. ಈ ಹೊಂಡಗಳು ರಾತ್ರಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಈ ಮಳೆಯ ಮಧ್ಯೆಯೂ ಹೆಚ್ಚು ಹೊಂಡ ಬಿದ್ದಿರುವ ಉದ್ಯಾವರದಲ್ಲಿ ಗುತ್ತಿಗೆದಾರರು ಹೊಂಡ ಮುಚ್ಚುವ ಕಾರ್ಯ ನಡೆಸಿದರೂ ತಕ್ಷಣದಲ್ಲಿಯೇ ಸುರಿದ ಮಳೆಗೆ ಗುಂಡಿಯ ಡಾಮರು ಕಿತ್ತು ಹೋಗಿರುವುದು ಕಂಡುಬಂದಿದೆ.
‘ರಾಷ್ಟ್ರೀಯ ಹೆದ್ದಾರಿಯ ಯಾವ ಭಾಗದಲ್ಲಿ ಹೊಂಡ ಇವೆ ಎಂಬುದು ಗೊತ್ತಾಗುವುದಿಲ್ಲ. ರಾತ್ರಿಯಂತೂ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೊಂಡ ಸಿಕ್ಕಿದ್ದರೆ ಪಲ್ಚಿಯಾಗಿ ವಾಹನಗಳ ಅಡಿಗೆ ಬೀಳುವ ಭೀತಿ ಎದುರಾಗುತ್ತದೆ. ಸದ್ಯ ಮಳೆಯಿಂದ ಗುಂಡಿ ಮುಚ್ಚಲು ಆಗುತ್ತಿಲ್ಲ. ಆದುದರಿಂದ ಸವರಾರರೇ ಬಹಳ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡ ಬೇಕು’
-ರಿತೇಶ್ ಅಮೀನ್, ದ್ವಿಚಕ್ರ ವಾಹನ ಸವಾರರು