×
Ad

ದಿಲ್ಲಿಯಲ್ಲಿ ಸಚಿವೆ ನಿರ್ಮಲಾ ಭೇಟಿಯಾದ ಸಂಸದ ರಾಘವೇಂದ್ರ; ಅಡಿಕೆ ಬೆಳೆಗಾರರಿಗೆ ಸಹಾಯಧನ ಬಿಡುಗಡೆಗೆ ಮನವಿ

Update: 2025-08-06 21:03 IST

ಕುಂದಾಪುರ, ಆ.6: ಅಡಿಕೆ ಬೆಳೆಗಾರರಿಗೆ ಸಹಾಯಧನದ ಬಿಡುಗಡೆ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವನ್ನು ಪ್ರಸಾದ್ ಯೋಜನೆಯಡಿ ಅಬಿವೃದ್ಧಿ, ಸಿಜಿಎಚ್‌ಎಸ್ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಕರಾವಳಿ ಭಾಗದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುವಂತೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ರನ್ನು ಇಂದು ಹೊಸದಿಲ್ಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದರು.

ತಮ್ಮ ಭೇಟಿಯ ಸಂದರ್ಭದಲ್ಲಿ ಕರಾವಳಿ ಭಾಗದ ವಿವಿಧ ಸಮಸ್ಯೆಗಳ ಕುರಿತಂತೆ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ರಾಘವೇಂದ್ರ, ವಾಸ್ತವ ಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿ ಅಗತ್ಯ ಅನುದಾನವನ್ನು ಬಿಡುಗಡೆಗೊಳಿ ಸುವಂತೆ ಕೋರಿಕೆ ಸಲ್ಲಿಸಿದರು.

ಅಡಿಕೆ ಬೆಳೆಗಾರರಿಗೆ ಸಹಾಯಧನ: ಸರಕಾರಿ ಮತ್ತು ಸರ್ಕಾರೇತರ ಸಂಸ್ಥೆಯ ಮೂಲಕ ರಾಜ್ಯದ ಅಡಿಕೆ ಕೃಷಿ ಬೆಳೆಗಾರ ರೈತ ಸಮುದಾಯವು ಕೃಷಿ ಇಲಾಖೆಗಳ ನಡುವೆ ಸೇತುವೆಯಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸು ತ್ತಿದ್ದು, ಪ್ರಾಯೋಜಿತ ಯೋಜನೆಯಡಿಯಲ್ಲಿ ರೈತರುಗಳು ಈಗಾಗಲೇ ಮಂಜೂರಾದ ಕೃಷಿ ಸಂಸ್ಕರಣಾ ಘಟಕಕ್ಕೆ ಶೇ.50 ಸಬ್ಸಿಡಿ ಹಣವನ್ನು ಪಡೆದುಕೊಂಡಿದ್ದಾರೆ.ಬಾಕಿ ಇರುವ ನಬಾರ್ಡ್ ಸಬ್ಸಿಡಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಕೋರಿದರು.

ಕೊಲ್ಲೂರು ಅಭಿವೃದ್ಧಿ: ಕೊಲ್ಲೂರು ಮೂಕಾಂಬಿಕ ದೇವಸ್ಥಾನವನ್ನು ಪ್ರಸಾದ್ ಯೋಜನೆಯಡಿ ಅಭಿವೃದ್ಧಿಪಡಿಸುವುದು. ಆದಿ ಶಂಕರಾಚಾರ್ಯ ರಿಂದ ಪ್ರತಿಷ್ಠಾಪಿಸಲ್ಪಟ್ಟ ಮೂಕಾಂಬಿಕಾ ದೇವಾಲಯ ದಕ್ಷಿಣ ಭಾರತದ ಆಧ್ಯಾತ್ಮಿಕ ಕ್ಷೇತ್ರದ ಮೂಲಾಧಾರವಾಗಿದೆ. ಧಾರ್ಮಿಕ ಮಹತ್ವದ ಜೊತೆಗೆ, ಸುತ್ತಮುತ್ತಲಿನ ಪ್ರದೇಶವು ನೈಸರ್ಗಿಕ ಆಸ್ತಿಗಳಾದ ನದಿ ಗಳು, ಕಡಲ ತೀರಗಳು, ಗಿರಿಧಾಮಗಳು, ಹಿನ್ನೀರು ಮತ್ತು ಮುಂಬರುವ ವಾಯುನೆಲೆಗಳ ಗಮನಾರ್ಹ ಮಿಶ್ರಣವನ್ನು ನೀಡುವುದರ ಜೊತೆಗೆ ಇವೆಲ್ಲವೂ 50 ಕಿ.ಮೀ. ವ್ಯಾಪ್ತಿಯಲ್ಲಿದೆ.

ಭೌಗೋಳಿಕತೆ ಹಾಗೂ ಆಧ್ಯಾತ್ಮಿಕತೆಯ ಸಮಗ್ರ ದೃಷ್ಟಿಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಅವಕಾಶವಿ ರುವುದರಿಂದ ಕೊಲ್ಲೂರು ಮೂಕಾಂಬಿಕ ದೇವಸ್ಥಾನವನ್ನು ಪ್ರವಾಸೋದ್ಯಮ ಸಚಿವಾಲಯದ ತೀರ್ಥಯಾತ್ರೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸಾದ್ ಯೋಜನೆಯಡಿ ಆಯ್ಕೆ ಮಾಡಲು ಪ್ರವಾಸೋದ್ಯಮ ಸಚಿವರಿಗೆ ಕ್ಷೇತ್ರದ ಬಗ್ಗೆ ಮನವರಿಕೆ ಮಾಡಿಕೊಟ್ಟು ಕೊಲ್ಲೂರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೋರಿಕೆ ಸಲ್ಲಿಸಿದರು.

ಸಿ.ಜಿ.ಹೆಚ್.ಎಸ್ ಆಸ್ಪತ್ರೆ: ಕರ್ನಾಟಕ ರಾಜ್ಯದ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಅವರ ಕುಟುಂಬಗಳು ಸಿಜಿಎಚ್‌ಎಸ್ ಕ್ಷೇಮ ಕೇಂದ್ರವನ್ನು ಪ್ರಾರಂಭಿಸುವಂತೆ ಸಾಕಷ್ಟು ಮನವಿ ಸಲ್ಲಿಸಿದ್ದು, ಈ ಕುರಿತಂತೆ ಇಸಿಜಿಎಚ್‌ಎಸ್ ಕ್ಷೇಮ ಕೇಂದ್ರವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ತೆರೆಯಲು ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡ ಹೇರಲಾಗಿತ್ತು. ಇದರ ಫಲವಾಗಿ ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕರ್ನಾಟಕದ ಶಿವಮೊಗ್ಗ, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಿಜಿಎಚ್‌ಎಸ್ ಕ್ಷೇಮ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಪ್ರಸ್ತುತ ಶಿವಮೊಗ್ಗ, ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಸಿಜಿಎಚ್‌ಎಸ್ ಕ್ಷೇಮ ಕೇಂದ್ರಗಳನ್ನು ತೆರೆಯಲು ಅಗತ್ಯ ಹುದ್ದೆಗಳ ಮಂಜೂರಾತಿ ಮತ್ತು ಸೂಕ್ತ ಅನುದಾನವನ್ನು ಬಿಡುಗಡೆ ಮಾಡುವಂತೆ ಸಂಸದರು ಸಚಿವೆ ನಿರ್ಮಲ ಸೀತಾರಾಮನ್‌ರೆಗೆ ಮನವಿ ಸಲ್ಲಿಸಿದರು.

ಪ್ರತಿಯೊಂದು ವಿಷಯಗಳಿಗೆ ಸೂಕ್ತ ವಿವರಣೆ ಪಡೆದ ನಿರ್ಮಲ ಸೀತಾರಾಮನ್, ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಅನುದಾನವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು ಎಂದು ರಾಘವೇಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News