×
Ad

ಉಡುಪಿ ಜಿಲ್ಲೆ: ಕ್ರೈಸ್ತರಿಂದ ಪವಿತ್ರ ಗುರುವಾರ ಆಚರಣೆ

Update: 2024-03-28 20:56 IST

ಉಡುಪಿ: ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ನಡೆಸಿದ ಅಂತಿಮ ಭೋಜನ ಹಾಗೂ ಕ್ರೈಸ್ತ ಧರ್ಮಸಭೆಯ ಉಗಮದ ನೆನಪನ್ನು ಸಾರುವ ಪವಿತ್ರ ಗುರುವಾರವನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತರು ಇಂದು ಶ್ರದ್ಧೆ, ಭಕ್ತಿಯಿಂದ ಆಚರಿಸಿದರು.

ಧರ್ಮಪಾಂತದ ಪ್ರಧಾನ ಧಾರ್ಮಿಕ ಕಾರ್ಯಕ್ರಮ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ನಡೆಯಿತು.

ಧರ್ಮಾಧ್ಯಕ್ಷರು 12 ಮಂದಿ ಪ್ರೇಷಿತರ (ವಿಶ್ವಾಸಿಗಳು) ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಜಗತ್ತಿಗೆ ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಿದರು.

ತಮ್ಮ ಸಂದೇಶದಲ್ಲಿ ಬಿಷಪ್ ಲೋಬೊ ಅವರು ಪವಿತ್ರ ಗುರುವಾರದಂದು ಕ್ರೈಸ್ತ ಸಭೆ ಪ್ರಮುಖ ಮೂರು ವಿಷಯಗಳ ಬಗ್ಗೆ ನೆನಪು ಮಾಡುತ್ತದೆ. ಅಂದು ಯೇಸು ಸ್ವಾಮಿ ಪರಮ ಪ್ರಸಾದ ಸ್ಥಾಪನೆ, ಯಾಜಕ ದೀಕ್ಷೆಯ ಸ್ಥಾಪನೆ ಮತ್ತು ತನ್ನ ಅಂತಿಮ ಭೋಜನದ ದಿನದಂದು ಸೇವೆಯ ಆಜ್ಞೆಯನ್ನು ತನ್ನ ಅನುಯಾಯಿಗಳಿಗೆ ನೀಡಿದರು. ಯೇಸು ಸ್ವಾಮಿ ಲೋಕ ಕಲ್ಯಾಣಕ್ಕಾಗಿ ತನ್ನನ್ನು ತಾನೇ ಈ ಲೋಕಕ್ಕೆ ಅರ್ಪಿಸಿದರು. ಅಂತೆಯೇ ನಾವು ನಮ್ಮ ಜೀವನವನ್ನು ಪರರ ಒಳಿತಿಗಾಗಿ ಜೀವಿಸುವ ಮೂಲಕ ಮಾದರಿಯಾಗಬೇಕು ಎಂದರು.

ಕ್ಯಾಥೆಡ್ರಲ್‌ನ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ.ಜೋಯ್ ಅಂದ್ರಾದೆ, ನಿವೃತ್ತ ಧರ್ಮಗುರು ವಂ.ಲೊರೆನ್ಸ್ ರೊಡ್ರಿಗಸ್ ಉಪಸ್ಥಿತರಿದ್ದರು.

ಪವಿತ್ರ ಗುರುವಾರದಂದು ಯೇಸು ಸ್ವಾಮಿಯು ತನ್ನ 12 ಮಂದಿ ಶಿಷ್ಯರೊಂದಿಗೆ ಸೇರಿ ತನ್ನ ಅಂತಿಮ ಭೋಜನ ನಡೆಸಿ ದ್ದರು. ಈ ವೇಳೆ ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ತನ್ನ ಶಿಷ್ಯರಿಗೆ ದೀನತೆಯ ಹಾಗೂ ಸೇವೆಯ ಸಂದೇಶ ಸಾರಿದ್ದರು. ಈ ದಿನ ಚರ್ಚ್‌ಗಳಲ್ಲಿ ಪರಮ ಪ್ರಸಾದ ಸಂಸ್ಕಾರ, ಗುರು ದೀಕ್ಷೆಯ ಸಂಸ್ಕಾರ, ಸೇವೆಯ ಸಂಸ್ಕಾರದ ಸ್ಮರಣೆಯೊಂದಿಗೆ ವಿಶೇಷ ಪ್ರಾರ್ಥನೆ, ಬಲಿಪೂಜೆ, ಆರಾಧನೆಗಳು ನಡೆಯುತ್ತವೆ.

ಪವಿತ್ರ ಗುರುವಾರದ ಬಳಿಕ ಶುಕ್ರವಾರದಂದು ಯೇಸು ಸ್ವಾಮಿಯನ್ನು ಶಿಲುಬೆಗೇರಿಸಿದ್ದು ಶುಕ್ರವಾರವನ್ನು ಕ್ರೈಸ್ತರು ಶುಭ ಶುಕ್ರವಾರವಾಗಿ ಆಚರಿಸಿ ಧ್ಯಾನ, ಉಪವಾಸ ಹಾಗೂ ಯೇಸುವಿನ ಶಿಲುಬೆಯ ಹಾದಿಯನ್ನು ನೆರವೇರಿಸುವ ಮೂಲಕ ಆಚರಿಸುತ್ತಾರೆ.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News