ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ, ಸಿಡಿಲಾಬ್ಬರ!
ಉಡುಪಿ, ಮೇ 25: ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಕೂಡ ಗುಡುಗು ಸಹಿತ ಭಾರೀ ಗಾಳಿ ಮಳೆ ಮುಂದು ವರೆದಿದ್ದು, ಇದರಿಂದ 30ಕ್ಕೂ ಅಧಿಕ ಮನೆಗಳಿಗೆ ಮತ್ತು ಕೃಷಿ ಬೆಳೆಗೆ ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 69.6 ಮಿ.ಮೀಟರ್ ಮಳೆಯಾಗಿದ್ದು, ಕಾರ್ಕಳ- 78.7ಮಿ.ಮೀ., ಕುಂದಾಪುರ 52.9.ಮಿ.ಮೀ., ಉಡುಪಿ- 90.9 ಮಿ.ಮೀ., ಬೈಂದೂರು-43.7ಮಿ.ಮೀ., ಬ್ರಹ್ಮಾವರ- 78.7.ಮಿ.ಮೀ., ಕಾಪು -130.9 ಮಿ.ಮೀ., ಹೆಬ್ರಿ- 70 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸಂಜೆಯಿಂದ ಜಿಲ್ಲೆಯಾದ್ಯಂತ ಮಳೆ ಆರಂಭವಾಗಿದ್ದು, ತಡರಾತ್ರಿ ವೇಳೆ ಭಾರೀ ಅಬ್ಬರದ ಗುಡುಗು ಮಿಂಚು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಕಾಪು, ಉಡುಪಿ ಹಾಗೂ ಬೈಂದೂರು ಪರಿಸರದಲ್ಲಿ ಹೆಚ್ಚಿನ ಗುಡುಗು ಮಿಂಚು ಬಂದಿರುವ ಬಗ್ಗೆ ವರದಿಯಾಗಿದೆ.
26 ಮನೆಗಳಿಗೆ ಹಾನಿ: ಕಾರ್ಕಳ ತಾಲೂಕಿನ ನಿಟ್ಟೆಯ ಸಾಧು ಮೂಲ್ಯ ಅವರಿಗೆ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಯಾಗಿದ್ದು, ಸುಮಾರು 30ಸಾವಿರ ರೂ. ನಷ್ಟ ಉಂಟಾಗಿದೆ. ಅದೇ ರೀತಿ ಕಾಪು ತಾಲೂಕಿನ ಕಟ್ಟಿಂಗೇರಿ ಹರೀಶ್, ಮಲ್ಲಾರಿನ ದಿನೇಶ್ ಕೋಟ್ಯಾನ್ ಹಾಗೂ ಶಿರ್ವದ ಲೀಲಾ ಆಚಾರ್ಯ ಎಂಬವರ ಮನೆ ಗಳಿಗೆ ಸಿಡಿಲು ಬಡಿದು ಒಟ್ಟು 80ಸಾವಿರ ರೂ. ನಷ್ಟವಾಗಿದೆ.
ಉಡುಪಿ ತಾಲೂಕಿನ 76 ಬಡಗಬೆಟ್ಟುವಿನ ಅಬ್ದುಲ್ ರಹೀಮ್ ಎಂಬವರ ಮನೆಯ ಗೋಡೆಗೆ ಸಿಡಿಲು ಬಡಿಲು ಭಾಗಶಃ ಹಾನಿಯಾಗಿದ್ದು, ಸುಮಾರು 75ಸಾವಿರ ರೂ. ನಷ್ಟ ಸಂಭವಿಸಿದೆ. ಅದೇ ರೀತಿ ಸಿಡಿಲು ಬಡಿದ ಪರಿಣಾಮ ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ಜ್ಯೋತಿ ಮರಾಠಿ ಎಂಬವರ ಮನೆಗೆ 50ಸಾವಿರ ರೂ. ಮತ್ತು ರೇವತಿ ಎಂಬವರ ಮನೆಗೆ ಒಂದು ಲಕ್ಷ ರೂ. ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರೀ ಗಾಳಿ ಮಳೆಯಿಂದಾಗಿ ಉಡುಪಿ ತಾಲೂಕಿನ ಪಡುತೋನ್ಸೆಯ ನೂರುದ್ದೀನ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಸುಮಾರು 75ಸಾವಿರ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಬೈಂದೂರು ತಾಲೂಕಿನ ಬೈಂದೂರು, ಯಳಜಿತ್, ಯಡ್ತರೆ, ಪಡುವರಿ ಗ್ರಾಮಗಳ ಒಟ್ಟು 20 ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು 8.90ಲಕ್ಷರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಕೃಷಿಗೆ ಅಪಾರ ಹಾನಿ: ಗಾಳಿ ಮಳೆಗೆ ಬೈಂದೂರು ತಾಲೂಕಿನ ವಿಘ್ನೇಶ್ವರ ಮುದ್ದೋಡಿ ಎಂಬವರ ಬಾಳೆ ಕೃಷಿ, ರಾಮ ಸೇರಿಗಾರ ಎಂಬವರ ಅಡಿಕೆ ಕೃಷಿ, ನಾಗರಾಜು ಎಂಬವರ ಬಾಳೆ ಹಾಗೂ ಅಡಿಕೆ ಮರ, ಪಡುವರಿ ಗ್ರಾಮದ ಮರ್ಲಿ ಎಂಬವರ ಅಡಿಕೆ ಮರ, ಯಡ್ತರೆ ಗ್ರಾಮದ ವೀರಭದ್ರ ಎಂಬವರ ಅಡಿಕೆ ಬೆಳೆಗೆ ಅಪಾರ ಹಾನಿ ಸಂಭವಿಸಿದ್ದು, ಒಟ್ಟು 2.5ಲಕ್ಷ ರೂ. ನಷ್ಟವಾಗಿದೆ.
ಅದೇ ರೀತಿ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಗೋವಿಂದ ನಾಯ್ಕ್, ಸಂಜೀವ ಮೊಗವೀರ, ಅಂಪಾರು ಗ್ರಾಮದ ಯಶೋಧ ಪಾಣಾ, ಸಿದ್ದು ಪೂಜಾರ್ತಿ ಎಂಬವರ ಜಾನುವಾರು ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದ್ದು, ಒಟ್ಟು 1.18ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಆವರಣ ಗೋಡೆ ಕುಸಿತ: 3 ದ್ವಿಚಕ್ರ ವಾಹನಗಳು ಜಖಂ
ಉಡುಪಿ ನಗರದಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ಇದರ ಪರಿಣಾಮ ಉಡುಪಿ ನಗರದ ಬೋರ್ಡ್ ಹೈಸ್ಕೂಲ್‌ಗೆ ಸಂಬಂಧಪಟ್ಟ ಆವರಣ ಗೋಡೆ ಕುಸಿದು ಬಿದ್ದು ವಾಣಿಜ್ಯ ಸಂಕೀರ್ಣವೊಂದರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮೂರು ದ್ವಿಚಕ್ರ ವಾಹನಗಳು ಹಾನಿಯಾಗಿ, ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ರಾತ್ರಿ ಸುರಿದ ಭಾರೀ ಮಳೆಗೆ ಬೋರ್ಡ್ ಹೈಸ್ಕೂಲ್‌ನ ಹಿಂಬದಿಯ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಕೃಷ್ಣಾ ಕಾಂಪ್ಲೆಕ್ಸ್‌ನ ಶ್ರೀ ನಾಗ ದೇವರ ಸನ್ನಿಧಿಯ ಪಕ್ಕದ ಸುಮಾರು 100 ಮೀಟರ್ ಉದ್ದದ ಆವರಣ ಗೋಡೆ ಕುಸಿದು ಬಿದ್ದಿದೆ.
ಇದರಿಂದ ಕಾಂಪ್ಲೆಕ್ಸ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳು ಅದರ ಅಡಿಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಸಾವಿರಾರು ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ. ಈ ಘಟನೆಯಿಂದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಸಮೀಪದ ಎರಡು ಅಂಗಡಿಗಳಿಗೆ ಮಳೆಯ ನೀರು ನುಗ್ಗಿ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.
ಬನ್ನಂಜೆಯಲ್ಲಿ ಮಳೆ ನೀರು ಹರಿದು ಹೋಗುವ ತೋಡು ಭಾರೀ ಮಳೆಗೆ ಜರಿದಿದ್ದು, ಬಳಿಕ ನಗರಸಭೆ ಸಿಬ್ಬಂದಿಗಳು ಆಗಮಿಸಿ ಅದನ್ನು ಸರಿಪಡಿಸಿದರು. ಅದೇ ರೀತಿ ಬನ್ನಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಜಂಕ್ಷನ್ ನಲ್ಲಿ ಅಳವಡಿಸಲಾದ ಟ್ರಾಫಿಕ್ ಬ್ಲಿಂಕರ್ ಭಾರಿ ಗಾಳಿಗೆ ಮುರಿದು ಬಿದ್ದಿದೆ. ಗುಂಡಿಬೈಲು, ಚಿಟ್ಪಾಡಿಯಲ್ಲಿ ಗದ್ದೆ ಸೇರಿದಂತೆ ತಗ್ಗು ಪ್ರದೇಶ ಜಲಾವೃತ ಗೊಂಡಿದ್ದು, ಶನಿವಾರ ಬೆಳಗ್ಗೆ ಮಳೆ ಪ್ರಮಾಣ ಕಡಿಮೆಯಾಗಿರುವುರದಿಂದ ಇಲ್ಲಿನ ನೀರು ಇಳಿಕೆಯಾಗಿದೆ.
ಭಾರೀ ಗಾಳಿ: ಕಡಲು ಪ್ರಕ್ಷುಬ್ಧ
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಉಡುಪಿ ಜಿಲ್ಲೆಯಾದ್ಯಂತ ಕಡಲು ಪ್ರಕ್ಷುಬ್ಧ ಗೊಂಡಿದೆ.
ಮಲ್ಪೆ ಬೀಚ್‌ನಲ್ಲಿ ಇಂದು ವಾರಾಂತ್ಯ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸಿರುವುದು ಮತ್ತು ನೀರಿನ ಆಡುತ್ತಿರು ವುದು ಕಂಡು ಬಂದಿದೆ. ಮಳೆ ಹಾಗೂ ಗುಡುಗು ಮಿಂಚಿನ ಹಿನ್ನೆಲೆಯಲ್ಲಿ ಪ್ರವಾಸಿಗರ ಬಗ್ಗೆ ಎಚ್ಚರ ವಹಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.