ಕುಂದಾಪುರ: ಅಪಾಯಕಾರಿ ಕಟ್ಟಡದ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ
ಕುಂದಾಪುರ, ಮೇ 25: ಕುಂದಾಪುರ ಪುರಸಭೆ ವ್ಯಾಪ್ತಿಯ ಕುಂದಾಪುರ ಹೃದಯ ಭಾಗದ ಮುಖ್ಯರಸ್ತೆಯ ಸಮೀಪದಲ್ಲಿಯೇ ಶಿಥಿಲಾವಸ್ಥೆಯಲ್ಲಿರುವ ಇರುವ ಹಳೆಯ ಅಪಾಯಕಾರಿ ಕಟ್ಟಡದ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಚಂದ್ರಮ ತಲ್ಲೂರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮುಂಗಾರು ಪ್ರಾರಂಭವಾದ ಹಿನ್ನಲೆಯಲ್ಲಿ ಮಳೆ ನೀರು ಬಿದ್ದು ಈ ಕಟ್ಟಡದ ಮಣ್ಣಿನ ಗೋಡೆಗಳು ಒದ್ದೆಯಾಗಿ ಇಕ್ಕೆಲಗಳಲ್ಲಿ ಬಿರುಕು ಬಿಟ್ಟು ಗೋಡೆಗಳೆಲ್ಲಾ ಕುಸಿಯಲಾರಂಭಿಸಿದೆ. ಸುಮಾರು ಮುರ್ನಾಲ್ಕು ವರ್ಷಗಳಿಂದಲೂ ಈ ಕಟ್ಟಡದ ಒಂದೊಂದು ಭಾಗವು ರಸ್ತೆಗೆ ಬೀಳುತ್ತಿದ್ದು ಈ ಬಾರಿ ಪೂರ್ಣ ಕಟ್ಟಡವೇ ಕುಸಿಯುವ ಹಂತದಲ್ಲಿದೆ. ಮುಖ್ಯ ರಸ್ತೆಯ ಪಕ್ಕದ ಲ್ಲಿರುವ ಈ ಕಟ್ಟಡದ ಹಂಚಿನ ಮಾಡಿನಲ್ಲಿ ಚಿಂದಿ ಆಯುವವರು, ಬಿಕ್ಷುಕರು ಆಶ್ರಯ ಪಡೆಯುತ್ತಾರೆ.
ಅಲ್ಲದೇ ಪಾದಾಚಾರಿಗಳು ಆ ಕಟ್ಟಡದ ಪಕ್ಕದಲ್ಲಿರುವ ಮುಖ್ಯ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದು ಇವರೊಂದಿಗೆ ಶಾಲಾ ಕಾಲೇಜು ಮಕ್ಕಳು ಬೆನ್ನಿಗೆ ಬ್ಯಾಗ್ ಹೇರಿಕೊಂಡು ಕೊಡೆ ಹಿಡಿದು ಈ ಕಟ್ಟಡದ ಸನಿಹದಲ್ಲೇ ನಡೆದು ಸಾಗುತ್ತಾರೆ. ಈ ಕಟ್ಟಡದ ಮಗ್ಗುಲಲ್ಲಿಯೇ ಕಾರು ಬೈಕುಗಳು ಪಾರ್ಕಿಂಗ್ ಮಾಡಲಾಗುತ್ತದೆ. ಒಟ್ಟಾರೆ ಮರಣ ಮೃದಂಗವನ್ನೇ ಬಾರಿಸುವಂತೆ ಇರುವ ಈ ಶಿಥಿಲಾವಸ್ಥೆಯ ಅಪಾಯಕಾರಿ ಕಟ್ಟಡದ ಬಗ್ಗೆ ಕೂಡಲೇ ಮುಂಜಾಗೃತ ಕ್ರಮ ವಹಿಸಬೇಕು. ಈ ಮೂಲಕ ಮುಂದಾಗುವ ಅನಾಹುತವನ್ನ ತಡೆಗಟ್ಟಿ ಮಾನವ ಜೀವಗಳನ್ನ ರಕ್ಷಿಸಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.