ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ
ಉಡುಪಿ, ಮೇ 25: ರಾತ್ರಿ ಹೊತ್ತು ಸಾರ್ವಜನಿಕರ ಮನೆಗೆ ನುಗ್ಗಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ಯುವಕನನ್ನು ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಹೆಚ್ಚಿನ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ಮಂಜೇಶ್ವರದ ಸ್ನೇಹಾಲಯಕ್ಕೆ ಶನಿವಾರ ದಾಖಲಿಸಿದ್ದಾರೆ.
ಯುವಕನನ್ನು ಕೇರಳ ಮೂಲದ ಮಣಿಕಂಠ(28) ಎಂದು ಗುರುತಿಸಲಾಗಿದ್ದು, ಪ್ರೇಮ ವೈಫಲ್ಯಗೊಂಡು ಮಾನಸಿಕ ಖಿನ್ನತೆಗೆ ಜಾರಿರುವ ಬಗ್ಗೆ ಆತನ ನಡವಳಿಕೆಯಿಂದ ಕಂಡುಬರುತ್ತದೆ. ಉಡುಪಿಗೆ ಬಂದಿರುವ ಈತ ರಾತ್ರಿ ಹೊತ್ತು ಸಾರ್ವಜನಿಕರ ಮನೆಗೆ ಹೊಕ್ಕು ದಾಂಧಲೆ ಎಬ್ಬಿಸುತ್ತಿದ್ದನು. ಹೀಗೆ ಆದಿಉಡುಪಿಯ ಗರ್ಭಿಣಿ ಮಹಿಳೆ ಇರುವ ಮನೆಗೆ ಹಠಾತ್ ನುಗ್ಗಿದ ಈತ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಈ ಸಂದರ್ಭದಲ್ಲಿ ಮಾಹಿತಿ ಪಡೆದ ವಿಶು ಶೆಟ್ಟಿ ಆತನನ್ನು ರಕ್ಷಿಸಿದ್ದಾರೆ.
ವಿಶು ಶೆಟ್ಟಿ ಅವರು ನಗರ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ, ಯುವಕನನ್ನು ಮಂಜೇಶ್ವರದ ಸ್ನೇಹಾಲಯಕ್ಕೆ ಕರೆದೊಯ್ದು ದಾಖಲಿಸಿದ್ದಾರೆ. ಕಾನೂನು ಪ್ರಕ್ರಿಯೆಯಲ್ಲಿ ನಗರ ಠಾಣೆಯ ಸಿಬ್ಬಂದಿ ಮಲ್ಲಿಕಾರ್ಜುನ ಸಹಕರಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹರೀಶ್ ಉದ್ಯಾವರ ನೆರವಾದರು.