ಕೊಂಕಣ ರೈಲ್ವೆ ಮಾರ್ಗದಲ್ಲಿ ತಪ್ಪಿದ ರೈಲು ದುರಂತ: ಉಡುಪಿ, ಸುರತ್ಕಲ್‌ನಲ್ಲಿ ನಿಂತ ರೈಲುಗಳು
ಉಡುಪಿ: ಜಾಗೃತ ಹಳಿ ನಿರ್ವಾಹಕ (ಟಿಎಂ) ಪ್ರದೀಪ್ ಶೆಟ್ಟಿ ಮಧ್ಯರಾತ್ರಿ 2:25ರ ಸುಮಾರಿಗೆ ಕೊಂಕಣ ರೈಲು ಮಾರ್ಗದ ಇನ್ನಂಜೆ ಹಾಗೂ ಪಡುಬದ್ರಿ ನಡುವೆ ರೈಲ್ವೆ ಹಳಿಯಲ್ಲಿ ಹಳಿ ಜಾಯಿಂಟ್ ಜಾರಿರುವುದನ್ನು ಪತ್ತೆ ಹಚ್ಚುವ ಮೂಲಕ ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದಾರೆ.
ಘಟನೆ ಶನಿವಾರ ಮಧ್ಯರಾತ್ರಿಯ ಬಳಿಕ ನಡೆದಿದೆ. ಟ್ರ್ಯಾಕ್ ಜಾಯಿಂಟ್ ತಪ್ಪಿರುವುದನ್ನು ಕತ್ತಲಲ್ಲೇ ಪತ್ತೆ ಹಚ್ಚಿದ ಪ್ರದೀಪ್ ಶೆಟ್ಟಿ ತಕ್ಷಣ ಅದನ್ನು ಉಡುಪಿಯಲ್ಲಿದ್ದ ಮೇಲಾಧಿಕಾರಿಗಳ ಗಮನಕ್ಕೆ ತಂದರು. ಹಿರಿಯ ಅಧಿಕಾರಿಗಳು ತಕ್ಷಣ ಆರ್‌ಎಂಇ (ದುರಸ್ಥಿ ಸಲಕರಣೆಗಳಿರುವ ವಾಹನ)ದೊಂದಿಗೆ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಹಳಿಯನ್ನು ದುರಸ್ಥಿ ಗೊಳಿಸಿದರು. ಇದಕ್ಕೆ ಮೂರು ಗಂಟೆ ತಗಲಿದ್ದು, ಈ ಮಧ್ಯೆ ಮಾರ್ಗದಲ್ಲಿ ಬಂದ ರೈಲುಗಳನ್ನು ಉಡುಪಿ ಹಾಗೂ ಸುರತ್ಕಲ್ ರೈಲು ನಿಲ್ದಾಣಗಳಲ್ಲಿ ತಡೆ ಹಿಡಿಯಲಾಯಿತು ಎಂದು ಕೊಂಕಣ ರೈಲ್ವೆಯ ಮಂಗಳೂರು ಪಿಆರ್‌ಓ ಸುಧಾ ಕೃಷ್ಣಮೂರ್ತಿ ತಿಳಿಸಿದರು.
ಇನ್ನಂಜೆ ಹಾಗೂ ಪಡುಬಿದ್ರಿಯ ನಡುವೆ 706/02-04ನಲ್ಲಿ ಹಳಿಯ ಜಾಯಿಂಟ್ ತಪ್ಪಿದ್ದನ್ನು ಪ್ರದೀಪ್ ಶೆಟ್ಟಿ ಕತ್ತಲಲ್ಲೇ ಪತ್ತೆ ಹಚ್ಚಿದ್ದರು. ಅವರಿಂದ ಮಾಹಿತಿ ಪಡೆದ ರೈಲ್ವೆ ಸಿಬ್ಬಂದಿಗಳು ಬಂದು ಹಳಿ ದುರಸ್ತಿಗೊಳಿಸಿದರು.
ಈ ನಡುವೆ ಮುಂಬೈಯಿಂದ ಬಂದ ನೇತ್ರಾವತಿ ಎಕ್ಸ್‌ಪ್ರೆಸ್‌ನ್ನು ಉಡುಪಿಯಲ್ಲಿ ಹಾಗೂ ಬೆಂಗಳೂರಿಂದ ಕಾರವಾರಕ್ಕೆ ತೆರಳುತ್ತಿದ್ದ ಪಂಚಗಂಗಾ ಎಕ್ಸ್‌ಪ್ರೆಸ್‌ನ್ನು ಸುರತ್ಕಲ್‌ನಲ್ಲಿ ತಡೆ ಹಿಡಿಯಲಾಯಿತು. ದುರಸ್ಥಿಯ ಬಳಿಕ ಈ ರೈಲುಗಳು ಮೂರು ಗಂಟೆಗಳ ವಿಳಂಬವಾಗಿ ತಮ್ಮ ಸಂಚಾರವನ್ನು ಪುನರಾರಂಭಿಸಿದವು.
ಬಹುಮಾನ ಘೋಷಣೆ: ಜಾಗೃತ ಹಳಿ ನಿರ್ವಾಹಕ ಪ್ರದೀಪ್ ಶೆಟ್ಟಿ ಅವರು ಮಧ್ಯರಾತ್ರಿ ಕತ್ತಲಲ್ಲಿ ಹಳಿ ಜಾಯಿಂಟ್ ತಪ್ಪಿರುವುದನ್ನು ಪತ್ತೆ ಹಚ್ಚಿರುವುದಕ್ಕಾಗಿ ಕೊಂಕಣ ರೈಲ್ವೆಯ ನೂತನ ಸಿಎಂಡಿ ಸಂತೋಷಕುಮಾರ್ ಝಾ ಅವರು 25,000ರೂ.ನಗದು ಬಹುಮಾನ ಘೋಷಿಸಿದ್ದು, ಅದನ್ನು ಇಂದೇ ಪ್ರದೀಪ್ ಶೆಟ್ಟಿ ಅವರಿಗೆ ನೀಡಲು ಸೂಚಿಸಿದ್ದರು.
ಅದರಂತೆ ಉಡುಪಿಯ ಸೀನಿಯರ್ ಇಂಜಿನಿಯರ್ ಗೋಪಾಲಕೃಷ್ಣ ಅವರು ದುರಸ್ತಿ ಕೆಲಸ ನಡೆದ ಸ್ಥಳದಲ್ಲಿ ಪ್ರದೀಪ್ ಶೆಟ್ಟಿ ಅವರಿಗೆ ಚೆಕ್‌ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಡುಪಿಯ ಸೆಕ್ಷನ್ ಇಂಜಿನಿಯರ್ ಮೋಹನ್, ಸುರತ್ಕಲ್ ಸ್ಟೇಶನ್‌ನ ಸುಪರಿಂಟೆಂಡೆಂಟ್ ರವಿರಾಜ್ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.