×
Ad

ಸಿಆರ್‌ಇ ಕೋಶಕ್ಕೆ ಹೆಚ್ಚಿನ ಅಧಿಕಾರ ನೀಡಿ, ಇಲ್ಲವೇ ಮುಚ್ಚಿ: ಮಾವಳ್ಳಿ ಶಂಕರ್ ಆಕ್ರೋಶ

Update: 2024-05-26 20:32 IST

ಉಡುಪಿ, ಮೇ 26: ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಪೊಲೀಸ್ ಇಲಾಖೆ ಮೂಲಕ ಕಾರ್ಯಾಚರಿಸುತ್ತಿರುವ ನಾಗರಿಕ ಹಕ್ಕುಗಳ ಜಾರಿ(ಸಿಆರ್‌ಇ) ಕೋಶಕ್ಕೆ ಯಾವುದೇ ಸರಿಯಾದ ಕ್ರಮ ಜರಗಿಸುವ ಅಧಿಕಾರ ಇಲ್ಲ. ಆದುದರಿಂದ ಸರಕಾರ ಈ ಕೋಶಕ್ಕೆ ಹೆಚ್ಚಿನ ಅಧಿಕಾರ ನೀಡಿ ಕೆಲಸ ಮಾಡಿಸಬೇಕು. ಇಲ್ಲದಿದ್ದರೆ ಅದನ್ನು ಮುಚ್ಚಬೇಕು. ಅದರ ಹೆಸರಿ ನಲ್ಲಿ ಕೋಟ್ಯಂತರ ಹಣ ವ್ಯಯ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಆರ್‌ಇ ಕೋಶಕ್ಕೆ ಪ್ರಾಸಿಕ್ಯುಷನ್ ಮಾಡುವ ಯಾವುದೇ ಅಧಿಕಾರ ಇಲ್ಲ. ಠಾಣೆಯಲ್ಲಿ ದಾಖಲಾದ ದೂರನ್ನು ಸಿಆರ್‌ಇ ವರ್ಗಾವಣೆ ಮಾಡಿದರೆ ಮಾತ್ರ ತನಿಖೆ ಮಾಡ ಲಾಗುತ್ತದೆ. ಯಾವುದೇ ಅಧಿಕಾರ ಇಲ್ಲದ ಅಂತಹ ಕೋಶ ಯಾಕೆ ಇರಬೇಕು. ಈ ಕೋಶ ಕೇವಲ ಪೋಸ್ಟ್‌ಮೆನ್ ಕೆಲಸ ಮಾಡುತ್ತಿದೆ. ಅದಕ್ಕೆ ಆರೋಪಿಗಳನ್ನು ಬಂಧಿಸುವ ಸೇರಿದಂತೆ ಯಾವುದೇ ಕ್ರಮ ಜರಗಿಸುವ ಅಧಿಕಾರ ಇಲ್ಲ ಎಂದು ಆರೋಪಿಸಿದರು.

ಯಾವುದೇ ದಲಿತ ದೌರ್ಜನ್ಯ ಪ್ರಕರಣಗಳನ್ನು ಸೀಮಿತ ಅವಧಿಯಲ್ಲಿ ಬಗೆಹರಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಡಿಸಿ, ಎಸ್ಪಿಯವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು. ಆದರೆ ಯಾವುದೇ ಪ್ರಕರಣಗಳಲ್ಲೂ ಉನ್ನತ ಅಧಿಕಾರಿಗಳನ್ನು ಹೊಣೆ ಮಾಡಿರುವುದು ಕಂಡು ಬಂದಿಲ್ಲ. ಮುಖ್ಯಮಂತ್ರಿಗಳ ಈ ಆದೇಶಗಳು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಎಂದು ಅವರು ಟೀಕಿಸಿದರು.

ಎಸ್‌ಸಿಎಸ್‌ಟಿಗಳು ಠಾಣೆಗೆ ದೂರು ಕೊಟ್ಟರೆ, ಅದಕ್ಕೆ ಪ್ರತಿಯಾಗಿ ದೂರು ನೀಡುವ ವ್ಯವಸ್ಥೆ ಕೆಲವು ದಿನಗಳಿಂದ ನಡೆಯು ತ್ತಿದೆ. ದೌರ್ಜನ್ಯಕ್ಕೆ ಒಳಗಾದವರ ವಿರುದ್ಧವೇ ಪ್ರತಿದೂರು ನೀಡುವ ಮೂಲಕ ಇಡೀ ಪ್ರಕರಣವನ್ನೇ ದಿಕ್ಕು ತಪ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಠಾಣೆಗಳಲ್ಲಿ ಸಭೆ ಕರೆಯುತ್ತಿಲ್ಲ: ಪ್ರತಿ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳುದಲಿತರ ಕುಂದು ಕೊರತೆ ಸಭೆ ಕರೆಯುವಂತೆ ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದೆ. ಆದರೆ ಅದು ಎಷ್ಟು ಪರಿಣಾಮಕಾರಿ ಯಾಗಿ ಜಾರಿಯಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ದೂರಿದರು.

ಎಸ್‌ಸಿಎಸ್‌ಟಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕೇವಲ ಶೇ.3-4ರಷ್ಟು ಮಾತ್ರ ಇದೆ. ಎಲ್ಲ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಆಗುತ್ತಿದ್ದಾರೆ. ಈ ಪ್ರಕರಣಗಳಲ್ಲಿ ನೇಮಕ ಮಾಡಲಾದ ವಕೀಲರು ಸರಿಯಾಗಿ ವಾದ ಮಾಡು ತ್ತಿಲ್ಲ. ದೂರನ್ನು ಸರಿಯಾಗಿ ತೆಗೆದು ಕೊಳ್ಳುತ್ತಿಲ್ಲ. ಆದುದರಿಂದ ಉತ್ತಮ ವಕೀಲರನ್ನು ನೇಮಕ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿ ಹೊಸ ರೀತಿಯಲ್ಲಿ ದಲಿತರ ಮೇಲಿನ ಅನ್ಯಾಯಕ್ಕೆ ಸರಕಾರ ಸರಿಯಾಗಿ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.

ಜೂ.9ರಂದು ಬೆಂಗಳೂರಿನಲ್ಲಿ ದಲಿತ ಚಳವಳಿಯ ನೇತಾರ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜನ್ಮ ದಿನವನ್ನು ರಾಜ್ಯ ಮಟ್ಟದ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಸಚಿವರಾದ ಜಾರಕಿಹೊಳಿ, ಮಹಾದೇವಪ್ಪ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮ್ ರಾಜ್ ಬಿರ್ತಿ, ಮಂಜುನಾಥ್ ಗಿಳಿಯಾರು, ಶ್ಯಾಮ್ ಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ, ವಾಸುದೇವ ಮುದೂರು, ಶಿವಣ್ಣ ಮೈಸೂರು, ಮಂಜುನಾಥ್ ಬಾಳ್ಕುದ್ರು, ಶಿವಾನಂದ ಬಿರ್ತಿ, ಸುರೇಶ್ ಬಿರ್ತಿ, ಶ್ರೀನಿವಾಸ ವಡ್ಡರ್ಸೆ ಉಪಸ್ಥಿತರಿದ್ದರು.

‘ಹೊರ ಗುತ್ತಿಗೆಯಲ್ಲಿ ಮೀಸಲಾತಿ ಘೋಷಣೆ ಮಾಡಿರುವ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ. ಇದು ನಮ್ಮ ಬಹು ದಿನಗಳ ಹಕ್ಕೋತ್ತಾಯವಾಗಿದೆ. ಆದರೆ ಇದರಲ್ಲಿ ಕೇವಲ 20ಕ್ಕಿಂತ ಕಡಿಮೆ ಜನ ಇದ್ದರೆ ಅಲ್ಲಿ ಈ ಮೀಸಲಾತಿ ಅನ್ವಯ ಆಗುವುದಿಲ್ಲ. ಅಂತಹ ಮೀಸಲಾತಿ ಯಾಕೆ ಬೇಕು. ಇದು ಸರಿಯಾದ ಕ್ರಮ ಅಲ್ಲ. ಸರಕಾರ ಈ ನೀತಿಯನ್ನು ಕೈಬಿಡ ಬೇಕು. ಆದುದರಿಂದ ಇದರಲ್ಲಿ ರೋಸ್ಟರ್ ಸಿಸ್ಟಮ್ ತಂದು ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಬೇಕು’

-ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕರು, ದಸಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News