×
Ad

ಹೊಸ ಕ್ರಿಮಿನಲ್ ಕಾನೂನುಗಳಿಂದ ದೇಶದಲ್ಲಿ ಅರಾಜಕತೆ ಸೃಷ್ಠಿ: ಹಿರಿಯ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ

Update: 2024-06-24 19:05 IST

ಉಡುಪಿ, ಜೂ.24: ಭಾರತೀಯ ದಂಡ ಕ್ರಿಯಾ ಸಂಹಿತೆ ಬದಲಾಗಿ ಜಾರಿಗೊಳ್ಳುತ್ತಿರುವ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಿಂದ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಇದರಿಂದ ದೇಶದಲ್ಲಿ ಅರಾಜಕತೆ ಸೃಷ್ಠಿಯಾಗು ವುದು ಶತಸಿದ್ಧ. ಈ ಮೂಲಕ ಯಾರ ಭಯವೂ ಇಲ್ಲದೆ ಈ ಸಮಾಜವನ್ನು ಬಲಾಢ್ಯರು, ರಾಜಕಾರಣಿಗಳು ಹಾಗೂ ಪೊಲೀಸರು ಆಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಉಡುಪಿಯ ಹಿರಿಯ ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ವಕೀಲರ ಸಂಘ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಸಹಯೋಗ ದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸಂವಾದ ಕಾರ್ಯ ಕ್ರಮದಲ್ಲಿ ಭಾರತೀಯ ದಂಡ ಕ್ರಿಯಾ ಸಂಹಿತೆ ಬದಲಾಗಿ ಜಾರಿಗೊಳ್ಳುತ್ತಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಇತರ ಎರಡು ಕಾನೂನುಗಳ ಕುರಿತು ಅವರು ಮಾತನಾಡುತಿದ್ದರು.

ಯಾವುದೇ ಪ್ರಕರಣದಲ್ಲಿ ಎಫ್‌ಐಆರ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಹೊಸ ಕಾನೂನಿನಲ್ಲಿ ಮೂರು ವರ್ಷ ಕ್ಕಿಂತ ಹೆಚ್ಚು ಹಾಗೂ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸುವಂತಹ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ತನಿಖೆ ಮಾಡಬೇಕಾಗಿಲ್ಲ. ಪ್ರಾಥಮಿಕ ತನಿಖೆ ನಡೆಸಲು ಪೊಲೀಸರಿಗೆ 14 ದಿನಗಳ ಕಾಲಾವಕಾಶ ಕೊಡಲಾಗಿದೆ. ನಮ್ಮ ದೇಶದಲ್ಲಿ ಶೇ.75ರಷ್ಟು ಕಾನೂನುಗಳು ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ವಿಧಿಸುವಂತದ್ದು. ಆದುದರಿಂದ ಈ ಅಂಶದಿಂದ ಸಂತ್ರಸ್ತರು ನ್ಯಾಯ ವಂಚಿತರಾಗುವ ಸಾಧ್ಯತೆ ಹೆಚ್ಚು. ಇದು ಸಂವಿಧಾನ ನಮಗೆ ನೀಡಿ ರುವ ನ್ಯಾಯ ಪಡೆಯುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಬ್ರಿಟೀಷರ ಕಾಲದಲ್ಲಿ ಜಾರಿಗೆ ಬಂದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೋಸಿಜರ್ ಕೋಡ್ (ಸಿಆರ್‌ಪಿಸಿ), ಭಾರತ ಸಾಕ್ಷ್ಯ ಅಧಿನಿಯಮ(ಇಂಡಿಯನ್ ಎವಿಡೆನ್ಸ್ ಆ್ಯಕ್ಟ್) ತುಂಬಾ ಪ್ರಮುಖವಾದ ಕಾನೂನುಗಳು. ಇದುವೇ ನಿಜವಾದ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್. ಈ ಮೂರು ಕಾನೂನುಗಳು ರತ್ನಗಳು ಇದ್ದಂತೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಹೊಸ ಕಾನೂನು ಯಾವ ಉದ್ದೇಶಕ್ಕೆ ತರಲಾಗಿದೆ ಎಂಬುದು ಅರ್ಥ ಆಗುತ್ತಿಲ್ಲ ಎಂದರು.

ಭಾರತೀಯ ದಂಡ ಕ್ರಿಯಾ ಸಂಹಿತೆ ಕಾನೂನುಗಳನ್ನು ಬದಲಾಯಿಸುವಂತೆ ಜನರಿಂದ ಯಾವುದೇ ಒತ್ತಾಯಗಳು ಬಂದಿಲ್ಲ ಮತ್ತು ಯಾವುದೇ ಪಕ್ಷಗಳ ಪ್ರಣಾಳಿಕೆಯಲ್ಲೂ ಆ ಬೇಡಿಕೆ ಇರಲಿಲ್ಲ. ಆದರೂ ಏಕಾಏಕಿ ಈ ಹೊಸ ಕಾನೂನು ಗಳನ್ನು ಜನರ ಮೇಲೆ ಏರಲಾಗುತ್ತಿದೆ ಎಂದ ಅವರು, ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ಅದರಂತೆ ಹಲವು ಕಾನೂನುಗಳಿಗೆ ತಿದ್ದುಪಡಿ ಕೂಡ ಆಗಿದೆ. ಆದರೆ ಇಡೀ ಕಾನೂನುಗಳನ್ನೇ ಬದಲಾಯಿಸುವ ಅಗತ್ಯ ಇದೆಯೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ ಎಂದರು.

ಈಗ ಹೊಸದಾಗಿ ಜಾರಿಗೆ ತರುತ್ತಿರುವ ಕಾನೂನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಲ್ಲ. ಬದಲು ನಾಗರಿಕ ಅಸುರಕ್ಷಾ ಸಂಹಿತೆಯಾಗಿದೆ. ಆದುದರಿಂದ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯಪ್ರವೇಶಿಸ ಬೇಕು. ಈ ಹೊಸ ಕಾನೂನುಗಳನ್ನು ಹೊಗಳುವವರು ಮೂರ್ಖರೇ ಹೊರತು ನಿಜವಾದ ನಾಗರಿಕರಲ್ಲ ಎಂದು ಅವರು ಟೀಕಿಸಿದರು.

ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭೋಗ್ ಮಾತನಾಡಿ, ಈ ಹೊಸ ಕಾನೂನು ಜಾರಿಗೆ ತರುವ ಮೊದಲು ಪೊಲೀಸ್, ನ್ಯಾಯಾಂಗ ವ್ಯವಸ್ಥೆ ಮೂಲಭೂತ ಸೌಲಭ್ಯಗಳನ್ನು ಪರಾಮರ್ಶೆ ಮಾಡಬೇಕಾಗಿತ್ತು. ಒಟ್ಟಾರೆಯಾಗಿ ಈ ಕಾನೂನುಗಳಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಇದರಿಂದ ಆರೋಪಿ ಶಿಕ್ಷೆ ಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು ಇವೆ. ಅದೇ ರೀತಿ ತಪ್ಪು ಮಾಡದವರಿಗೆ ಶಿಕ್ಷೆ ಆಗುವ ಸಾಧ್ಯತೆಗಳು ಕೂಡ ಇವೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಮೈಕಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಕೃತಕ್ಕಾಗಿ ಹೆಸರು ಬದಲಾವಣೆ!

ಭಾರತದಲ್ಲಿ ಅನುಸೂಚಿತ 22 ಭಾಷೆಗಳಿವೆ. ಈ ದೇಶದಲ್ಲಿ 60 ಕೋಟಿ ಮಂದಿ ಹಿಂದಿ, ಆರು ಕೋಟಿ ಮಂದಿ ಕನ್ನಡ, 20ಲಕ್ಷ ಕೊಂಕಣಿ, ತುಳು ಭಾಷೆ ಮಾತನಾಡುವವರಿದ್ದಾರೆ. ಆದರೆ ಸಂಸ್ಕೃತ ಭಾಷೆ ಮಾತನಾಡುವವರ ಸಂಖ್ಯೆ ಕೇವಲ 24000 ಮಾತ್ರ. ಆದರೂ ಸಂಸ್ಕೃತ ಭಾಷೆಯಲ್ಲಿ ಈ ಕಾಯಿದೆ ಯನ್ನು ಹೆಸರಿಸಲಾಗಿದೆ. ಸರಿಯಾಗಿ ಪರಿಶೀಲಿಸಿದಾಗ ಈ ಹೊಸ ಕಾನೂನಿನಲ್ಲಿ ಇರುವುದು ಶೇ.75ರಷ್ಟು ಈ ಹಿಂದಿನ ಅಂಶಗಳೇ. ಅಂದರೆ ಸಂಸ್ಕೃತ ಹೆಸರು ಇಡುವುದಕ್ಕಾಗಿಯೇ ಈ ಕಾನೂನಿನ ಹೆಸರು ಬದಲಾಯಿಸಲಾಗಿದೆ ಎಂಬ ಅನುಮಾನ ಮೂಡುತ್ತದೆ ಎಂದು ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News