ಸರಕಾರಿ ಬಸ್ ಸೇವೆಗಾಗಿ ಆಲೂರಲ್ಲಿ ಕಾಲ್ನಡಿಗೆ ಜಾಥ -ಧರಣಿ
ಕುಂದಾಪುರ, ಜೂ.24: ಆಲೂರು ಗ್ರಾಪಂ ವ್ಯಾಪ್ತಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಲೂರು ಹಾಗೂ ಜನವಾದಿ ಮಹಿಳಾ ಸಂಘಟನೆ ನಾಡ ವಲಯದ ವತಿಯಿಂದ ಸೋಮವಾರ ಆಲೂರಲ್ಲಿ ಕಾಲ್ನಡಿಗೆ ಜಾಥ ಹಾಗೂ ಧರಣಿ ನಡೆಸಲಾಯಿತು.
ಮಾರಣಕಟ್ಟೆ- ಚಿತ್ತೂರು- ಆಲೂರು- ಹರ್ಕೂರು- ಕಟ್ಟಿನಮಕ್ಕಿ- ಮುಳ್ಳಿಕಟ್ಟೆ ಯಾಗಿ ಕುಂದಾಪುರಕ್ಕೆ ಬಸ್ ಹಾಗೂ ಆಲೂರು- ಹೊಯ್ಯಾಣ- ತಾರಿ ಬೇರು- ಅಕ್ಷಾಲಿಬೆಟ್ಟು - ಕೋಣ್ಕಿ- ಮೊವಾಡಿ ಮಾರ್ಗದಲ್ಲಿ ಕುಂದಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ್, ಆಲೂರಿಗೆ ಬಸ್ ಬೇಡಿಕೆಗಾಗಿ ಇದು ಎರಡನೇ ಹಂತದ ಹೋರಾಟ ನಡೆಯುತ್ತಿದೆ. ಈಗಲೂ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮಂಗಳೂರಿನ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಮುಂದೆಯೇ ಧರಣಿ ನಡೆಸ ಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಟ್ಟಡ ಕಾರ್ಮಿಕರ ಬೈಂದೂರು ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿದರು. ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯಸದರ್ಶಿ ಸಂತೋಷ್ ಹೆಮ್ಮಾಡಿ, ಆಲೂರು ಘಟಕದ ಅಧ್ಯಕ್ಷ ರಘುರಾಮ್ ಆಚಾರ್, ಗಣೇಶ್ ಆಚಾರ್ ಆಲೂರು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಕ್ಷ ವೆಂಕಟೇಶ್ ಕೋಣಿ, ಕಾರ್ಯಿದರ್ಶಿ ನಾಗರತ್ನ ನಾಡ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ಕಾರ್ಯದರ್ಶಿ ಗಣೇಶ್ ಆಲೂರು, ಜನವಾದಿ ಮಹಿಳಾ ಸಂಘಟನೆ ನಾಡ ವಲಯದ ಅಧ್ಯಕ್ಷೆ ಮನೋರಮಾ ಭಂಡಾರಿ, ಕಾರ್ಯಿದರ್ಶಿ ಶೋಭಾ ಕೆರೆಮನೆ, ಪ್ರಮುಖರಾದ ಪಲ್ಲವಿ ನಾಡ, ಸುನೀತಾ ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು.