ಡಿವೈಡರ್ ತೆರವು: ಕಾನೂನು ಕ್ರಮಕ್ಕೆ ಮುಂದಾದ ಲೋಕೋಪಯೋಗಿ ಇಲಾಖೆ
ಕಾರ್ಕಳ: ಪಡುಬಿದ್ರೆ ಚಿಕ್ಕಲಗುಡ ರಾಜ್ಯ ಹೆದ್ದಾರಿಯ ಬಂಗ್ಲೆಗುಡ್ಡೆಯಿಂದ ಪುಲ್ಕೆರಿಯವರೆಗೆ ಅಳವಡಿಸಲಾಗಿದ್ದ ಡಿವೈಡರನ್ನು ಖಾಸಗಿ ವ್ಯಕ್ತಿಗಳು ಕೆಲವೊಂದು ಕಡೆ ಅಕ್ರಮವಾಗಿ ಕೆಡವಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯು ಕಾನೂನು ಕ್ರಮಕ್ಕೆ ಮುಂದಾಗಿದೆ.
ಕಾರ್ಕಳ ಬಂಗ್ಲೆಗುಡ್ಡೆ - ಪುಲ್ಕೇರಿ ಬೈಪಾಸ್ ರಸ್ತೆಯ ಬದಿಗೆ ತಾಗಿಕೊಂಡಿರುವ ಖಾಸಗಿ ವ್ಯಕ್ತಿಗಳ ಜಾಗದಲ್ಲಿ ನಿರ್ಮಿಸಲಾದ ಡಿವೈಡರ್ ಅಕ್ರಮವಾಗಿ ತೆರವುಗೊಳಿಸಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯು ಶ್ರೀ ವೇಣುಗೋಪಾಲ ದೇವಸ್ಥಾನದ ಬಳಿಯ ಎಚ್‌ಪಿ ಪೆಟ್ರೋಲ್ ಬಂಕ್, ಶಿವತಿಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿರುವ ನಯರ ಪೆಟ್ರೋಲ್ ಬಂಕ್ ಹಾಗೂ ಸರ್ವಜ್ಞ ವೃತ್ತ ಬಳಿಯ ರೋಹಿತ್ ಶೆಟ್ಟಿ ಮಾಲೀಕತ್ವದ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್‌ಗೆ ಕೆಡವಿರುವ ಡಿವೈಡರ್ ಸರಿಪಡಿಸುವಂತೆ ನೋಟೀಸು ಜಾರಿಗೊಳಿಸಿದೆ.
ಬಂಕ್ ಮಾಲಕರು ವಿಭಾಜಕವನ್ನು ಸರಿಮಾಡಿರುವ ಬಗ್ಗೆ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಪರಿಶೀಲಿಸಿದಾಗ ಬಂಕ್ ಮಾಲಕರು ಲ್ಯಾಟರೈಟ್ ಕಲ್ಲು, ಬ್ಯಾರಿಕೇಡ್‌ಗಳಿಂದ ತಾತ್ಕಾಲಿಕವಾಗಿ ಮುಚ್ಚಿರುವುದು ಕಂಡುಬಂದಿರುವುದರಿಂದ ಲೋಕೋಪಯೋಗಿ ಇಲಾಖೆಯು ಕಾರ್ಕಳ ನಗರ ಠಾಣೆಗೆ ಈ ಬಗ್ಗೆ ವರದಿ ನೀಡುವಂತೆ ತಿಳಿಸಿದ್ದರು. ಈ ಬಗ್ಗೆ ಕಾರ್ಕಳ ನಗರ ಠಾಣೆಯು ವಾಹನಗಳ ಹಿತದೃಷ್ಟಿಯಿಂದ ವಿಭಾಜಕವನ್ನು ಯಥಾವತ್ತು ಮುಚ್ಚುವಂತೆ ವರದಿ ನೀಡಿದ್ದು, ಈ ವರದಿಯ ಆಧಾರದ ಮೇಲೆ ತಾತ್ಕಾಲಿಕವಾಗಿ ಮುಚ್ಚಿರುವ ವಿಭಾಜಕವನ್ನು ಸರಿಪಡಿಸುವಂತೆ ಜೂ. 24ರಂದು ಮತ್ತೊಮ್ಮೆ ಬಂಕ್ ಮಾಲಕರಿಗೆ ನೋಟೀಸು ನೀಡಿದ್ದು, 3 ದಿನಗಳೊಳಗಾಗಿ ಯಥಾ ಮೊದಲಿನ ಸ್ಥಿತಿಗೆ ಸರಿಪಡಿಸುವಂತೆ ಸೂಚಿಸಿದೆ. ಇಲ್ಲವಾದಲ್ಲಿ ಸದರಿ ಜಾಗಗಳಲ್ಲಿ ಅಪಘಾತಗಳು ಸಂಭವಿಸಿದ್ದಲ್ಲಿ ಇದಕ್ಕೆ ತಾವೇ ಜವಾಬ್ದಾರರಾಗಿರುತ್ತೀರಿ ಮತ್ತು ಮುಚ್ಚದಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದೆ.
ಸಾರ್ವಜನಿಕರ ರಸ್ತೆಯ ಡಿವೈಡರ್ ಕಿತ್ತೆಸೆದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಸಾರ್ವಜನಿಕರ ಹಣವನ್ನು ಹಾಳು ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬರುತ್ತಿದೆ.