ಧಾರಕಾರ ಮಳೆ: ಉಡುಪಿ ನಗರದ ತಗ್ಗು ಪ್ರದೇಶಗಳು ಜಲಾವೃತ
ಉಡುಪಿ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಯಿಂದ ಉಡುಪಿ ನಗರದ ಹಲವು ಪ್ರದೇಶಗಳು ಜಲಾವೃತ ಗೊಂಡಿವೆ. ನಗರದಲ್ಲಿನ ಇಂದ್ರಾಣಿ ನದಿ ಕಾಲುವೆಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆ ಕೃತಕ ನೆರೆ ಉಂಟಾಗಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಸಗ್ರಿ ವಾರ್ಡ್‌ನ ಕೀರ್ತಿ ನಗರ ಫಸ್ಟ್ ಕ್ರಾಸ್ ನಲ್ಲಿರುವ ಮನೆಯ ಮೇಲೆ ಮರ ಬಿದ್ದು ಹಾನಿ ಯಾಗಿ ನಷ್ಟ ಉಂಟಾಗಿದೆ. ಇಂದ್ರಾಣಿ ನದಿ ಕಾಲುವೆಗಳು ತುಂಬಿ ಹರಿಯುತ್ತಿರುವುದರಿಂದ ಗುಂಡಿಬೈಲು ಎಂಬಲ್ಲಿರುವ ತೆಂಗಿನ ತೋಟದಲ್ಲಿ ಕೃತಕ ನೆರೆ ಸಂಭವಿಸಿದೆ.
ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಮಠದಬೆಟ್ಟು ಪರಿಸರದ ಕೆಲವು ಮನೆಗಳ ಆವರಣಕ್ಕೆ ನೀರು ನುಗ್ಗಿದೆ. ಇಲ್ಲಿ ಸಂಚ ರಿಸುವ ರಸ್ತೆಯ ಪಕ್ಕದಲ್ಲಿನ ತೋಡಿನ ಮಣ್ಣು ತೆಗೆಯದಿರುವುದರಿಂದ ನೀರು ಇಕ್ಕೇಲಗಳ ಜಾಗಗಳಲ್ಲಿ ತುಂಬಿಕೊಂಡಿದೆ.
ಅದೇ ರೀತಿ ಬನ್ನಂಜೆ ಸರಕಾರಿ ಬಸ್ ನಿಲ್ದಾಣದ ಎದುರಿನಿಂದ ಕರಾವಳಿ ಬೈಪಾಸ್‌ವರೆಗೆ ಮಳೆ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ತಾತ್ಕಾಲಿಕವಾಗಿ ಚರಂಡಿಗಳನ್ನು ನಿರ್ಮಿಸಿ ಈಗಾಗಲೇ ಮುಖ್ಯ ರಸ್ತೆಯಲ್ಲಿರುವ ಚರಂಡಿಗಳಿಗೆ ಹರಿಯುವಂತೆ ಮಾಡಿದರೆ ಸಮಸ್ಯೆ ಪರಿಹಾರ ಆಗಬಹುದೆಂದು ಸಾರ್ವಜನಿಕರು ತಿಳಿಸಿದ್ದಾರೆ.
ಮೆಸ್ಕಾಂಗೆ 17.8ಲಕ್ಷ ರೂ. ನಷ್ಟ
ರಾತ್ರಿಯಿಂದ ಸುರಿಯುತ್ತಿರುವ ಗಾಳಿಮಳೆಯಿಂದಾಗಿ ಜಿಲ್ಲೆಯಾದ್ಯಂತ ಮೆಸ್ಕಾಂ ಇಲಾಖೆಯ ಸುಮಾರು 102 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದು ಹಾನಿ ಉಂಟಾಗಿದೆ.
ಅದೇ ರೀತಿ ಎಂಟು ಟ್ರಾನ್ಸ್‌ಪಾರ್ಮರ್‌ಗಳು, 1.6ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿಯಾಗಿವೆ. ಇದರಿಂದ ಸುಮಾರು 17.8ಲಕ್ಷ ರೂ. ನಷ್ಟ ಉಂಟಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ದುರಸ್ತಿ ಮಾಡುವ ಕಾರ್ಯ ಎಲ್ಲ ಕಡೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಂತಾರು ರೈಲ್ವೆ ಸೇತುವೆ ರಸ್ತೆ ಸ್ಥಗಿತ
ಭಾರೀ ಮಳೆಯಿಂದಾಗಿ ಬ್ರಹ್ಮಾವರ -ಪೇತ್ರಿ -ಹೆಬ್ರಿ ರಸ್ತೆಯಲ್ಲಿನ ಚಾಂತಾರು ಎಂಬಲ್ಲಿರುವ ರೈಲ್ವೆ ಸೇತುವೆ ಕೆಳಗಿನ ರಸ್ತೆಯು ನೀರು ನಿಂತಿದ್ದು, ಇಂದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿರುವ ಬಗ್ಗೆ ವರದಿ ಯಾಗಿದೆ.
ಧಾರಕಾರ ಮಳೆಯಿಂದ ಚಾಂತಾರು ರೈಲ್ವೆ ಸೇತುವೆ ಕೆಳಗಿನ ತಗ್ಗಿನ ರಸ್ತೆಯು ನೀರು ತುಂಬಿದ್ದು, ಇದರಿಂದ ಈ ರಸ್ತೆ ಯಲ್ಲಿ ಸಂಚರಿಸುವ ಬಸ್ ಸೇರಿದಂತೆ ಇತರ ವಾಹನಗಳು ಹರಸಾಹಸ ಪಡುವಂತಾಗಿದೆ. ನೀರು ಹೆಚ್ಚಾದ ಪರಿಣಾಮ ಕೆಲಕಾಲ ಸಂಚಾರವೇ ಸ್ಥಗಿತಗೊಂಡಿತ್ತು. ಸಣ್ಣ ವಾಹನಗಳು ಇಲ್ಲಿ ಹಾದು ಹೋಗಲು ಅಸಾಧ್ಯವಾಗಿರುವುದು ಕಂಡುಬಂತು.