ಕೆಂಪೇಗೌಡರಿಂದ ಬೆಂಗಳೂರು ಖ್ಯಾತಿ ಪಡೆದಿದೆ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಜೂ.27: ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಟ್ಟು ನಿರ್ಮಿಸಿದ ಬೆಂಗಳೂರು ನಗರ ಕೋಟ್ಯಾಂತರ ಜನರು ಬದುಕು ಕಟ್ಟಿಕೊಳ್ಳಲು ಆಶ್ರಯ ಆಗುವುದರ ಜೊತೆಗೆ ವಿಶ್ವಖ್ಯಾತಿ ಪಡೆದ ನಗರವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಗುರುವಾರ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
15-16ನೇ ಶತಮಾನದ ಅವಧಿಯಲ್ಲಿ ನಾಡಪ್ರಭು ಕೆಂಪೇಗೌಡರು ಸ್ವತಂತ್ರವಾಗಿ ಯೋಚಿಸುವ ವ್ಯಕ್ತಿತ್ವ ಹೊಂದಿದ್ದು, ಮುಂದಿನ 4ರಿಂದ 5 ಶತಮಾನದಲ್ಲಿ ಬೆಂಗಳೂರು ನಗರವನ್ನು ಅಭಿವೃದ್ಧಿ ಪಡಿಸುವ ದೂರದೃಷ್ಟಿ ಇಟ್ಟುಕೊಂಡು ನಗರವನ್ನು ಅತ್ಯುತ್ತಮವಾಗಿ ನಿರ್ಮಾಣ ಮಾಡಿದ್ದಾರೆ ಎಂದರು.
ಕೆಂಪೇಗೌಡರು ನಗರ ನಿರ್ಮಾಣ ಮಾಡುವಾಗಲೇ ಸಮಾಜದ ಪ್ರತಿಯೊಂದು ಜನಾಂಗದ ಕುಲಕಸುಬು ಹಾಗೂ ವೃತ್ತಿ ಆಧಾರಿತವಾಗಿ ಜನರ ಆರ್ಥಿಕ ಅಭಿವೃದ್ಧಿಗೆ ಅನೇಕ ಪೇಟೆಗಳನ್ನು ನಿರ್ಮಿಸಿದರು. ಈಗಲೂ ಸಹ ಬೆಂಗಳೂರಿನಲ್ಲಿ ಚಿಕ್ಕಪೇಟೆ, ಕಾಟನ್‌ಪೇಟೆ, ಕುಂಬಾರ ಪೇಟೆ, ಅಕ್ಕಿಪೇಟೆ, ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳು ಇರುವುದನ್ನು ಕಾಣಬಹುದಾಗಿದೆ ಎಂದರು.
ನಾಗರಿಕ ಸಮಾಜಕ್ಕೆ ಅವಶ್ಯವಿರುವ ನೀರಿನ ಸವಲತ್ತುಗಳನ್ನು ಕಲ್ಪಿಸಲು ನಗರದಲ್ಲಿ ಅನೇಕ ಕೆರೆಕಟ್ಟೆಗಳ ನಿರ್ಮಾಣ ಮಾಡುವುದರ ಜೊತೆಗೆ ನೀರು ಒಂದು ಕೆರೆ ತುಂಬಿ ಮತ್ತೊಂದು ಕೆರೆಗೆ ಸಾಗಲು ಕಾಲುವೆ ನಿರ್ಮಾಣ ಯೋಜನೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರು. ಇಂದಿಗೂ ಬೆಂಗಳೂರಿನಲ್ಲಿ ಕೆಂಪಾಂಬುದಿ ಕೆರೆ, ಹಲಸೂರು ಕೆರೆ, ಕಾರಂಜಿ ಕೆರೆ ಸೇರಿ ದಂತೆ ಅನೇಕ ಕೆರೆಗಳನ್ನು ನಿರ್ಮಿಸಿರುವುದು ಜಲ ಮೂಲಗಳಿಗೆ ಕೊಟ್ಟ ಆದ್ಯತೆಯನ್ನು ನಾವು ನೋಡಬಹುದಾಗಿದೆ ಎಂದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ದೇಶದಲ್ಲಿ ಬಹಳಷ್ಟು ನಗರ ಗಳು ನದಿ ತೀರದಲ್ಲಿ ಸ್ಥಾಪನೆಗೊಂಡಿದ್ದು, ಬೆಂಗಳೂರು ನಗರಕ್ಕೆ ಯಾವುದೇ ನದಿ ತೀರ ಇಲ್ಲ. ಆದರೂ ಬದಲಿಗೆ ಕೆರೆ-ಕಟ್ಟೆಗಳನ್ನು ನಿರ್ಮಾಣ ಮಾಡಿ, ಕುಡಿಯುವ ನೀರು, ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಕಾಶ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಮಾಜದಲ್ಲಿ ಎರಡು ತರಹದ ವ್ಯಕ್ತಿತ್ವವನ್ನು ಹೊಂದಿರುವವರನ್ನು ಕಾಣಬಹುದು. ಒಬ್ಬರು ಸಮಾಜ ದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಶ್ರೀಮಂತರಾಗುತ್ತಾರೆ. ಇನ್ನೊಬ್ಬರು ಸಮಾಜದಲ್ಲಿರುವ ಜನರಿಗೆ ಬದುಕನ್ನು ಕಟ್ಟಿಕೊಡಲು ಮುಂದಾಗುತ್ತಾರೆ. ನಾಡಪ್ರಭು ಕೆಂಪೇಗೌಡರು ಸಮಾಜದ ಎಲ್ಲಾ ಜನರ ಅಭಿವೃದ್ಧಿಗೆ ಮುಂದಾಗಿ ಇಂದಿಗೂ ಪ್ರತಿಯೊಬ್ಬ ರಿಗೂ ಅವಿಸ್ಮರಣೀಯ ವ್ಯಕ್ತಿಯಾಗಿದ್ದಾರೆ ಎಂದರು.
ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.ಇದೇ ವೇಳೆ ಕೆಂಪೇಗೌಡರ ಜಯಂತಿ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಜಿಲ್ಲಾ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಎ, ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ, ವಕ್ಕಲಿಗ ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ದಯಾನಂದ ಕಾರ್ಯಕ್ರಮ ನಿರೂಪಿಸಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಮಾ ಎಸ್ ವಂದಿಸಿದರು.