×
Ad

ಕುಂದಾಪುರದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ

Update: 2024-06-27 20:30 IST

ಕುಂದಾಪುರ, ಜೂ.27: ನಾಡಪ್ರಭು ಕೆಂಪೇಗೌಡರ ಜನಪರ ಕಾಳಜಿ ಮೆಚ್ಚುವಂತದ್ದು. ಬೆಂಗಳೂರು ನಿರ್ಮಾಣದ ಹೊತ್ತಲ್ಲಿ ಕುಲಕಸುಬುಗಳನ್ನು ಸೃಷ್ಟಿಸಿದ್ದು, ಹೊರೆಗಲ್ಲುಗಳನ್ನು ನಿರ್ಮಿಸಿದ್ದು ಅವರ ದೂರಗಾಮಿ ಚಿಂತನೆ ತೋರಿಸುತ್ತದೆ. ನಾವಿರುವ ವಾತಾವರಣ ನಮ್ಮದು ಎಂಬ ರಕ್ಷಣೆ ಚಿಂತನೆ ಮೂಡಿದಾಗಲೇ ಸುಂದರ ವಾತಾವರಣ ನಿರ್ಮಾಣ ಸಾಧ್ಯ. ಜಯಂತಿಗಳ ಆಚರಣೆ ಮೂಲಕ ಜೀವನದಲ್ಲಿ ಬದಲಾವಣೆಯಾಗಬೇಕು ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್. ಹೇಳಿದ್ದಾರೆ.

ತಾಲೂಕು ಆಡಳಿತ ಕುಂದಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣ ದಲ್ಲಿರುವ ಶ್ರೀಲಕ್ಷ್ಮೀನರಸಿಂಹ ಕಲಾಮಂದಿರಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಶರಾವತಿ ಉಪನ್ಯಾಸ ನೀಡಿ ಮಾತನಾಡಿ, ಕೆಂಪೇಗೌಡ ಬಾಲ್ಯದಿಂದಲೇ ಮಹತ್ವಾಕಾಂಕ್ಷೆ ಯೋಜನೆಗಳನ್ನು ಹೊಂದಿದ್ದರು. ಬೆಂಗಳೂರು ನಿರ್ಮಾಣಕ್ಕೆ 1514 ಜನವರಿ 14ರಂದು ಗುದ್ದಲಿ ಪೂಜೆ ಇಂದಿನ ರಾಜಾ ಸರ್ಕಲ್ ಎಂಬಲ್ಲಿ ನಡೆದಿದ್ದು ಅಂದಿನಿಂದ ಇಂದಿನವರೆಗೆ ಬೆಂಗಳೂರು ಬೆಳೆಯುತ್ತಿದ್ದು ಜಗದಗಲದೆತ್ತರಕ್ಕೆ ಕೀರ್ತಿ ವಿಸ್ತರಿಸಿದೆ. ಜನರುಗಳು ನಾಡ ದೊರೆಯ ಕ್ಷೇಮಕ್ಕೆ ಹರಕೆ ಹೊತ್ತ ಶಾಸನವಿರುವುದು ಕೆಂಪೇಗೌಡರದ್ದು ಮಾತ್ರ ಎಂದು ನುಡಿದರು.

ದುಡಿಯುವ ಕನಸು ಹೊತ್ತು ಬಂದವರನ್ನು ಬೆಂಗಳೂರು ಕೈಬಿಡುವುದಿಲ್ಲ. ಎಲ್ಲಾ ಕುಲಕಸುಬುಗಳು ಇಲ್ಲಿರಬೇಕೆಂಬ ದೂರದೃಷ್ಟಿ ಚಿಂತನೆಯನ್ನು ಅವರು ಹೊಂದಿದ್ದರು. ಕೋಟೆಗಳು, ಕೆರೆಗಳು ಹಾಗೂ ಪೇಟೆಗಳು, ಕಾವಲು ಗೋಪುರಗಳನ್ನು ನಿರ್ಮಿಸಿದ್ದರು. ರೈತರಿಗೆ, ವ್ಯಾಪಾರಿಗಳಿಗೆ ಕೆಂಪೇಗೌಡರು ನೀಡಿದಸಹಕಾರ ಅಪಾರ. ನ್ಯಾಯದಾನದಲ್ಲೂ ಇವರನ್ನು ಮೀರಿಸುವವರಿಲ್ಲ. ಧರ್ಮಭೀರು, ನ್ಯಾಯಭೀರು ನಾಡಪ್ರಭು ಕೆಂಪೇಗೌಡರ ಜೀವನವೇ ಆದರ್ಶಪ್ರಾಯ ಎಂದು ಶರಾವತಿ ವಿವರಿಸಿದರು.

ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮಿ ಎಚ್.ಎಸ್, ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್., ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲ ಕಿರಣ ಹೆಗ್ಡೆ ಉಪಸ್ಥಿತರಿದ್ದರು.

ಉಪತಹಶೀಲ್ದಾರ್ ವಿನಯ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News