×
Ad

ಉಡುಪಿ: ಮಳೆಗಾಲದ ಸಾಂಕ್ರಮಿಕ ರೋಗಗಳ ಮುಂಜಾಗ್ರತಾ ಸಭೆ

Update: 2024-06-27 21:01 IST

ಉಡುಪಿ, ಜೂ.27: ನಗರಸಭಾ ವ್ಯಾಪ್ತಿಯ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಮಳೆಗಾಲದಲ್ಲಿ ಹರಡಬಹುದಾದ ಮಲೇರಿಯಾ, ಫೈಲೇರಿಯಾ, ಡೆಂಗಿ, ಚಿಕನ್‌ಗುನ್ಯ ಹಾಗೂ ಇತರ ಸಾಂಕ್ರಮಿಕ ರೋಗಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಬಿಲ್ಡರ್ಸ್ ಅಸೋಸಿಯೇಷನ್ ಮತ್ತು ನಗರಸಭೆಯು ಆರೋಗ್ಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಸಭೆಯು ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ನೀರು ನಿಂತು ಸಾಂಕ್ರಮಿಕ ರೋಗಗಳು ಹರಡುವ ಸಂಭವ ವಿದ್ದು, ಈ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕಟ್ಟಡ ನಿರ್ಮಾಣ ಸ್ಥಳಗಳ ಸುತ್ತಮುತ್ತ ಸ್ವಚ್ಛತೆ ಯನ್ನು ಕಾಯ್ದುಕೊಳ್ಳಬೇಕು ಎಂದರು.

ಕೆಲಸಗಳಿಗೆ ಹೊರ ಜಿಲ್ಲೆ ಹಾಗೂ ಇತರ ಕಡೆಗಳಿಂದ ಬರುವ ಕಾರ್ಮಿಕರಿಗೆ ಕಡ್ಡಾಯವಾಗಿ ಸ್ಕೃಿನಿಂಗ್ ಹಾಗೂ ರಕ್ತ ಪರೀಕ್ಷೆ ಮಾಡಿಸಿ ಅದರ ಮಾಹಿತಿಯನ್ನು ಜಿಲ್ಲಾಸ್ಪತ್ರೆಗೆ ನೀಡಬೇಕು. ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ ರೋಗ ಹರಡುವಿಕೆಗೆ ಕಾರಣವಾಗುವ ಅಂಶಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಯಾವುದೇ ಜ್ವರ ಅಥವಾ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ಸಭೆಯಲ್ಲಿ ಪೌರಾಯುಕ್ತ ರಾಯಪ್ಪ ಮಾತನಾಡಿ, ಯಾವುದೇ ಪ್ರದೇಶದಲ್ಲಿ ಮಲೇರಿಯಾ, ಫೈಲೇರಿಯಾ, ಡೆಂಗಿ, ಚಿಕನ್‌ಗುನ್ಯ ಪ್ರಕರಣಗಳು ಹೆಚ್ಚು ಕಂಡುಬಂದಲ್ಲಿ ಇಂತಹ ಘಟನೆಗೆ ಕಾರಣವಾದ ಬಿಲ್ಡರ್ಸ್‌ಗಳ ಪರವಾನಿಗೆ ಯನ್ನು ರದ್ದುಗೊಳಿಸಲಾಗುತ್ತದೆ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ನಗರದ ವಿವಿಧ ಬಿಲ್ಡರ್ಸ್‌ಗಳು, ನಗರಸಭೆಯ ಪರಿಸರ ಅಭಿಯಂತರ ಸ್ನೇಹ ಕೆ.ಎಸ್, ಜಿಲ್ಲಾ ಎಂಟಮೋಲೋಜಿಸ್ಟ್ ಮುಕ್ತ, ಪ್ರಭಾರ ಆರೋಗ್ಯ ನಿರೀಕ್ಷಕರಾದ ಮನೋಹರ್, ಸುರೇಂದ್ರ ಹೋಬಳಿದಾರ್, ಹರೀಶ್ ಬಿಲ್ಲವ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News