×
Ad

ಅರಣ್ಯದ ಪುನಶ್ಚೇತನ ಕಾರ್ಯದಲ್ಲಿ ಯುವಕರ ಪಾತ್ರ ಪ್ರಮುಖ: ಜೀತ್ ಮಿಲನ್

Update: 2024-06-29 19:12 IST

ಕುಂದಾಪುರ, ಜೂ.29: ಮಾನವನ ಅತಿಕ್ರಮಣ, ವಿವಿಧ ಯೋಜನೆಗಳ ಕಾರಣದಿಂದಾಗಿ ಮರಗಳ ಮಾರಣ ಹೋಮವಾಗುತ್ತಿದೆ. ಜಗತ್ತಿನಲ್ಲಿ ಈಗಾಗಲೇ ಶೇ.58 ಅರಣ್ಯ ನಾಶವಾಗಿದೆ. ಭಾರತದಲ್ಲಿ ಪ್ರಸ್ತುತ ಶೇ.3ರಷ್ಟು ಮಾತ್ರ ಅರಣ್ಯ ಸಮೃದ್ಧಿಯಲ್ಲಿದೆ. ಇನ್ನು ಮುಂದಾದರೂ ಯುವಕರು ಅರಣ್ಯಕ್ಕೆ ಚೇತನ ನೀಡಬೇಕು. ಈ ಕೆಲಸ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮೂಲಕ ನಡೆಯಬೇಕಾಗಿದೆ ಎಂದು ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಹೇಳಿದ್ದಾರೆ.

ಕುಂದಾಪುರ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ 32ನೇ ಸ್ವಚ್ಛ ಕಡಲತೀರ- ಹಸಿರು ಕೋಡಿ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ದೇವರು ನೀಡಿದ ಸುಂದರ ಕಡಲ ತೀರ ಪರಿಸರವನ್ನು ಮುಂದಿನ ಪೀಳಿಗೆಗೆ ಶುಚಿಯಾಗಿಡುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಕಾರ್ಯವನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಪ್ರತಿ ತಿಂಗಳ ಕೊನೆಯ ರವಿವಾರ ’ಸ್ವಚ್ಛ ಕಡಲತೀರ- ಹಸಿರು ಕೋಡಿ’ ಎಂಬ ಅಭಿಯಾನದ ಮೂಲಕ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದು ಹೇಳಿದರು.

ಸಸಿಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಮಾತನಾಡಿ, ಈ ಗಿಡಗಳನ್ನು ಮಗುವಿನಂತೆ ಪ್ರೀತಿಯಿಂದ ತಮ್ಮ ತಮ್ಮ ಮನೆಗಳಲ್ಲಿ ಬೆಳೆಸಿ ಪೋಷಿಸಬೇಕೆಂದರು.

ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸೀಫ್ ಬ್ಯಾರಿ, ಪುರಸಭಾ ಸದಸ್ಯರಾದ ಕಮಲಾ, ಲಕ್ಷ್ಮೀ, ವಿವಿಧ ಅಂಗ ಸಂಸ್ಥೆಗಳ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ- ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News