×
Ad

‘ಇನ್‌ಸ್ಪಾಯರ್ ಅವಾರ್ಡ್’: ರಾಷ್ಟ್ರಮಟ್ಟಕ್ಕೇರಿದ ಕುಕ್ಕುಜೆ ಪ್ರೌಢಶಾಲೆ!

Update: 2024-06-29 19:37 IST

ನಿಕಿತಾ, ಅಮೂಲ್ಯ ಹೆಗ್ಡೆ

ಉಡುಪಿ, ಜೂ.29: ಉಡುಪಿ ಜಿಲ್ಲೆಯ ಅತ್ಯಂತ ಗ್ರಾಮೀಣ ಪ್ರದೇಶ ದಲ್ಲಿರುವ ಸರಕಾರಿ ಪ್ರೌಢಶಾಲೆಯೊಂದು ಅಸಾಧ್ಯವೆನಿಸಿದ್ದನ್ನು ಸಾಧ್ಯವೆಂದು ಸಾಧಿಸಿ ತೋರಿಸಿದೆ!

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನಡೆಸುವ ‘ಇನ್‌ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆ’ಗೆ ಒಂದೇ ಸರಕಾರಿ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಇದುವರೆಗೆ ಯಾರೂ ಸಾಧಿಸಿರದ ಸಾಧನೆಯನ್ನು ಸಾಧಿಸಿ ತೋರಿಸಿದ್ದಾರೆ!

ಕಾರ್ಕಳ ತಾಲೂಕಿನ ಕುಕ್ಕುಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಅಮೂಲ್ಯ ಹೆಗ್ಡೆ ಹಾಗೂ ನಿಕಿತಾ ರಚಿಸಿದ ‘ಫ್ಲಡ್ ಡಿಟೆಕ್ಟರ್’ ಹಾಗೂ ‘ರೋಪೋ ಮೀಟರ್’ ಎಂಬ ಎರಡು ಪ್ರಾಜೆಕ್ಟ್‌ಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ರಾಜ್ಯಕ್ಕೇ ಕೀರ್ತಿಯನ್ನು ತಂದಿದ್ದಾರೆ. ಇವರು ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

ಕಠಿಣ ಸ್ಪರ್ಧಾ ಹಂತ: ಇನ್‌ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯು ಅತ್ಯಂತ ಕ್ಲಿಷ್ಟಕರವಾದ ಹಂತಗಳನ್ನು ಹೊಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದೇ ಒಂದು ದೊಡ್ಡ ಸವಾಲೆನಿಸಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಕುಕ್ಕುಜೆ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳಾದ -ಅಮೂಲ್ಯ ಹೆಗ್ಡೆ, ಅನಿಶ್, ನಿಕಿತಾ ಮತ್ತು ಶ್ರೇಯಾ- ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಹೆಮ್ಮೆ ಯನ್ನುಂಟು ಮಾಡಿದ್ದರು.

ಇವರಲ್ಲಿ ಅಮೂಲ್ಯ ಹೆಗ್ಡೆ ಹಾಗೂ ನಿಕಿತಾ ಎಂಬಿಬ್ಬರು ವಿದ್ಯಾರ್ಥಿನಿಯರು ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ, ಒಂದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೊಸ ಇತಿಹಾಸ ಸೃಷ್ಟಿಸಿದರು.

ಅಮೂಲ್ಯ ಹೆಗ್ಡೆ ‘ಫ್ಲಡ್ ಡಿಟೆಕ್ಟರ್’ ಎಂಬ ಜೀವರಕ್ಷಕ ಯಂತ್ರವನ್ನು ರಚಿಸಿದ್ದಾಳೆ. ಪ್ರವಾಹ, ಅತಿವೃಷ್ಟಿಯಂಥ ನೈಸರ್ಗಿಕ ವಿಕೋಪದ ಸಂದರ್ಭ ದಲ್ಲಿ ಸಾವಿರಾರು ಜನರ ಪ್ರಾಣವನ್ನು ಉಳಿಸಬಲ್ಲ ಈ ಯಂತ್ರದ ವಿಶೇಷತೆ ಯೆಂದರೆ, ಇದು ಒಂದಿಷ್ಟು ದುಬಾರಿಯಾಗಿಲ್ಲ. ಅಷ್ಟೇ ಅಲ್ಲ; ಇದನ್ನು ಎಲ್ಲಿ ಯಾರು ಬೇಕಾದರೂ ಅಳವಡಿಸುವಷ್ಟು ಅತ್ಯಂತ ಸರಳ ತಂತ್ರಜ್ಞಾನವನ್ನು ಹೊಂದಿದೆ.

ಇನ್ನು ನಿಕಿತಾ ರಚಿಸಿದ ‘ರೋಪೋ ಮೀಟರ್’ ಯಂತ್ರವು ವೈರ್, ಕೇಬಲ್, ಹಗ್ಗ ಮೊದಲಾದ ಉದ್ದನೆಯ ವಸ್ತುಗಳನ್ನು ಚಿಟಿಕೆ ಹೊಡೆಯು ವದೊಳಗೆ ಕರಾರುವಕ್ಕಾಗಿ ಅಳೆದುಕೊಡುತ್ತದೆ! ಕೇಬಲ್, ವೈರ್ ಅಂಗಡಿಗಳಲ್ಲಿ ಒಂದೊಂದೇ ಮಾರು ಹಿಡಿದು ಅಳತೆ ಮಾಡುವ ತ್ರಾಸದಾಯಕ ಕೆಲಸವನ್ನು ಈ ಸರಳ ಯಂತ್ರವು ಸೆಕೆಂಡ್‌ಗಳ ಒಳಗೆ ಮಾಡಿ ಮುಗಿಸುತ್ತದೆ!

ಸ್ಪರ್ಧೆಗೆ ಸಿದ್ಧಪಡಿಸಿದ್ದು ಸಮಾಜ ಶಿಕ್ಷಕ: ವಿದ್ಯಾರ್ಥಿಗಳು ಮಾಡೆಲ್‌ಗಳನ್ನು ನಿರ್ಮಿಸಲು ಪೋತ್ಸಾಹಿಸಿ ಅವುಗಳಿಗೆ ರಾಷ್ಟ್ರ ಮಟ್ಟದ ಮನ್ನಣೆ ದೊರೆಯುವಂತೆ ಮಾಡಲು ಮಕ್ಕಳನ್ನು ಸಿದ್ಧಗೊಳಿಸಿದ ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಕ್ಲಾಸಿನಲ್ಲಿ ಸಮಾಜ ಪಾಠ ಮಾಡುವ ಶಿಕ್ಷಕರೆನ್ನುವುದು ವಿಶೇಷ! ಸಂಸ್ಥೆಯ ಎಲ್ಲಾ ಸಹದ್ಯೋಗಿಗಳ ಸಹಕಾರ ಪಡೆದು ಸುರೇಶ್ ಮರಕಾಲ ವಿದ್ಯಾರ್ಥಿಗಳನ್ನು ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಗೆ ಸಿದ್ಧಗೊಳಿಸುತಿದ್ದಾರೆ.

ಡಿಡಿಪಿಐ ಸೇರಿ ಹಲವರಿಂದ ಶುಭ ಹಾರೈಕೆ: ಕುಕ್ಕುಜೆ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ರಾಷ್ಟ್ರ ಮಟ್ಟದ ಸಾಧನೆಯನ್ನು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ, ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಜಿಲ್ಲಾ ಇನ್‌ಸ್ಪಾಯರ್ ಅವಾರ್ಡ್ ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಭಟ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಬಿ.ಎ., ಶಾಲೆಯ ಪೋಷಕರು, ಎಸ್‌ಡಿಎಂಸಿ ಮತ್ತು ಎಸ್‌ಬಿಸಿ ಅಭಿನಂದಿಸಿದ್ದಾರೆ.

ಏನೀದು ‘ಇನ್‌ಸ್ಪಾಯರ್ ಅವಾರ್ಡ್’ ಸ್ಪರ್ಧೆ

ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತರುವುದಕ್ಕಾಗಿಯೇ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರತಿವರ್ಷ ‘ಇನ್‌ಸ್ಪಾಯರ್ ಅವಾರ್ಡ್ ಮಾನಕ್’ ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ದೇಶಾದ್ಯಂತ ನಡೆಸುತ್ತಿದೆ.

ಶಾಲಾ ಮಟ್ಟದಿಂದ ಆರಂಭವಾಗುವ ಈ ಸ್ಪರ್ಧೆಯು ಮುಂದೆ ಜಿಲ್ಲಾ ಮಟ್ಟ, ರಾಜ್ಯಮಟ್ಟ ಕೊನೆಗೆ ರಾಷ್ಟ್ರಮಟ್ಟದಲ್ಲಿ ಸಂಪನ್ನಗೊಳ್ಳುತ್ತದೆ. ರಾಷ್ಟ್ರಮಟ್ಟದಲ್ಲಿ ಒಟ್ಟು 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಆಯ್ದ ವಿದ್ಯಾರ್ಥಿಗಳು ಜಪಾನ್‌ನಲ್ಲಿ ನಡೆಯುವ ‘ಸುಕುರಾ’ ಎಂಬ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಸುವರ್ಣಾವಕಾಶ ಪಡೆಯುತ್ತಾರೆ!.

"ಕುಕ್ಕುಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಅಮೂಲ್ಯ ಹೆಗ್ಡೆ ಹಾಗೂ ನಿಕಿತಾ ಎಂಬ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳು ಇನ್‌ಸ್ಪಾಯರ್ ಅವಾರ್ಡ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅತ್ಯಂತ ಅಭಿಮಾನ ತಂದಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದು ಉಲ್ಲೇಖಾರ್ಹ. ಅದರಲ್ಲೂ ಒಂದೇ ಸಂಸ್ಥೆಯ ಎರಡು ದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿದೆ. ಯಾವುದೇ ವಿಶೇಷ ಅವಕಾಶಗಳಿಲ್ಲದಿದ್ದರೂ, ಇಬ್ಬರು ಹೆಣ್ಣುಮಕ್ಕಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆಯಾ ಗುವಂತೆ ಮಾಡಿರುವ ಶಿಕ್ಷಕರ ಸಾಧನೆಯನ್ನು ಶ್ಲಾಘಿಸುತ್ತೇನೆ".

-ಗಣಪತಿ ಕೆ, ಡಿಡಿಪಿಐ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News