ಕರ್ನಾಟಕ ರಾಜಕಾರಣ ಇಂದು ಗೊಂದಲಮಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜೂ.29: ಕರ್ನಾಟಕ ರಾಜಕಾರಣ ಇಂದು ಗೊಂದಲಮಯ ವಾಗಿದೆ. ಜನಸಾಮಾನ್ಯರಿಗೆ ಆಡಳಿತ ನೀಡುವ ಬಿಗಿತನವನ್ನು ಸರಕಾರ ಕಳೆದುಕೊಂಡಿದೆ. ಮಠಾಧೀಶರು ನೀಡುವ ಹೇಳಿಕೆಗಳು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ರಾಜ್ಯದಲ್ಲಿ ಒಂದೇ ಒಂದು ಬಡವರ ಕಲ್ಯಾಣ ಯೋಜನೆಗಳು ಜಾರಿಯಾಗುತ್ತಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರಕಾರವನ್ನು ಟೀಕಿಸಿದ್ದಾರೆ.
ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಕೋಟ ಶ್ರೀನಿವಾಸ ಪೂಜಾರಿ ಇಂದು ಬೆಳಗ್ಗೆ ನಗರದ ಇಂದ್ರಾಳಿ ರೈಲ್ವೆ ಸೇತುವೆಯ ಅಪೂರ್ಣ ಕಾಮಗಾರಿಯ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ರಾಜ್ಯದ ಬಡ ಮಕ್ಕಳಿಗೆ ವಿದ್ಯೆ ಮುಂದುವರಿಸಲು ಹಾಸ್ಟೆಲ್‌ಗಳು ಸಿಗುತ್ತಿಲ್ಲ ಎಂಬ ದೂರು ಸಾರ್ವತ್ರಿಕವಾಗಿದೆ. ಪರಿಶಿಷ್ಟ ಜಾತಿ-ಪಂಗಡದ ಹಣವನ್ನು ಇವರು ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ಒಟ್ಟಾರೆಯಾಗಿ ಬಹಳ ದಿನಗಳ ಕಾಲ ಈ ಸರಕಾರ ಮುಂದುವರಿಯುತ್ತೆ ಅನಿಸಲ್ಲ. ಒಂದು ವಿಪಕ್ಷವಾಗಿ ನಾವು ಏನು ಮಾಡಬಹುದು ಅವೆಲ್ಲವನ್ನು ಮಾಡುತ್ತಿದ್ದೇವೆ ಎಂದು ನುಡಿದರು.
ರಾಜ್ಯದಲ್ಲಿ ಈಗ ಭಾರೀ ವಿವಾದಕ್ಕೆ ಕಾರಣವಾಗಿರುವ ಸಿಎಂ ಬದಲಾವಣೆ ಹಾಗೂ ಡಿಸಿಎಂಗಳ ವಿವಾದದ ಕುರಿತು ಮಾತನಾಡಿದ ಕೋಟ, ಮುಖ್ಯಮಂತ್ರಿ ಬದಲಾಗಬೇಕೆಂದು ಆಡಳಿತ ಪಕ್ಷದ ಸದಸ್ಯರೇ ಹೇಳುತ್ತಿದ್ದಾರೆ. ಶಾಸಕರು ಮತ್ತು ಮಂತ್ರಿಗಳು ಇದಕ್ಕೆ ಧ್ವನಿಗೂಡಿಸಿದ್ದಾರೆ.ಒಬ್ಬ ಮುಖ್ಯಮಂತ್ರಿ ಬಿಟ್ಟು ಎಲ್ಲಾ ಶಾಸಕರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್‌ನ ಹಿರಿಯರೇ ವ್ಯಂಗ್ಯ ಮಾಡುತ್ತಿದ್ದಾರೆ ಎಂದವರು ಲೇವಡಿ ಮಾಡಿದರು.
ವಾಲ್ಮೀಕಿ ನಿಗಮದ ಹಗರಣ ಕುರಿತು ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಿದ್ದರಿಂದ ಅದರ ತನಿಖೆ ಆಗುತ್ತಿದೆ. ಈ ಸರಕಾರದ್ದು ಆನೆ ಚರ್ಮ, ದಬ್ಬಾಳಿಕೆಯ ಮಾತುಗಳನ್ನು ಆಡುತ್ತಿದೆ. ಸರಕಾರ ನಡೆಸುವ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದರು.
ವಾಲ್ಮೀಕಿ ನಿಗಮದ ಹಗರಣ ವಿಚಾರದಲ್ಲಿ ಸರಕಾರ ಆರೋಪಿಗಳ ರಕ್ಷಣೆ ಮಾಡಲು ಮುಂದಾಗಿದೆ ಎಂಬ ಅಭಿಪ್ರಾಯ ಇದೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ನಾವು ಒತ್ತಾಯಿಸಿದ್ದೇವೆ ಎಂದ ಕೋಟ, ನೀಟ್ ವಿವಾದದಲ್ಲಿ ಕೇಂದ್ರ ಸರಕಾರ ಸಿಬಿಐ ತನಿಖೆಗೆ ಆದೇಶಿಸಿ ಆಗಿದೆ. ತಪ್ಪಾಗಿದ್ದರೆ ಕ್ರಮ ಆಗಿಯೇ ಆಗುತ್ತೆ. ಈ ಬಗ್ಗೆ ಅನಗತ್ಯ ಗಲಾಟೆ ಎಬ್ಬಿಸಿ ಸದನ ಮುಂದೂಡಲು ಒತ್ತಾಯಿಸಿದ್ದಾರೆ. ಸಿಬಿಐ ತನಿಖೆಗಿಂತ ಈ ದೇಶದಲ್ಲಿ ಬೇರೆ ದೊಡ್ಡ ತನಿಖೆ ಇಲ್ಲ. ಕಾಂಗ್ರೆಸ್ ಈ ವಿಷಯದಲ್ಲಿ ಅನಗತ್ಯ ಮೊಂಡವಾದ ಮಾಡುತ್ತಿದೆ. ಕಾಂಗ್ರೆಸಿನ ಈ ಆರೋಪಕ್ಕೆ ಪ್ರತಿಕ್ರಿಯೆ ಕೊಡುವುದು ಸಾಧ್ಯವಿಲ್ಲ ಎಂದು ಮೋದಿ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡರು.