ಉಡುಪಿ: ನಗರದ ವಿವಿದೆಡೆಗಳಲ್ಲಿ ಡೆಂಗಿ ಜಾಗೃತಿ ಕಾರ್ಯಕ್ರಮ
ಉಡುಪಿ: ನಗರಸಭೆಯ ವತಿಯಿಂದ ಡೆಂಗಿ, ಚಿಕನ್ ಗುನ್ಯ, ಮಲೇರಿಯಾ, ಡಯೇರಿಯಾ ಮತ್ತು ಫೈಲೇರಿಯಾ ಮುಂತಾದ ಸಾಂಕ್ರಮಿಕ ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ಕಾರ್ಯಗಾರ ಮತ್ತು ಡ್ರೈ ಡೇ(ಒಣದಿನ)ಯನ್ನು ಉಡುಪಿಯ ಸೈಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ರಾಯಪ್ಪ ಮಾತನಾಡಿ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಡೆಂಗಿ ಮುಂಜಾಗೃತಾ ಕ್ರಮವಾಗಿ ಅಪಾರ್ಟ್ ಮೆಂಟ್, ಹೋಟೆಲ್, ಅಂಗಡಿಗಳು, ಗೂಡಂಗಡಿಗಳು, ಫಾಸ್ಟ್ ಫುಡ್ ಅಂಗಡಿಗಳು ಸೇರಿದಂತೆ ವಿವಿದೆಡೆ ಅಂಗಡಿಗಳ ಸರ್ವೆ ನಡೆಸಿ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಈಗಾಗಲೇ ಸ್ವಚ್ಛತೆಯನ್ನು ಕಾಪಾಡದ 171 ಅಂಗಡಿಗಳಿಗೆ ನಗರಸಭೆ ವತಿಯಿಂದ ನೋಟಿಸ್ ನೀಡಿ 7200 ರೂ. ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗೃತೆ ವಹಿಸಿ ನಗರಸಭೆ ಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಬೇವಿನ ಎಣ್ಣೆಯನ್ನು ಉಚಿತವಾಗಿ ವಿತರಿಸಿದ್ದಲ್ಲದೇ, ಶಾಲೆಯ ಸುತ್ತಮುತ್ತ ಕೀಟನಾಶಕವನ್ನು ಸಿಂಪಡಿಸಲಾಯಿತು. ಶಾಲೆಯ ಮುಖ್ಯೋಪಾದ್ಯಾಯರು, ನಗರಸಭೆಯ ಪರಿಸರ ಅಭಿಯಂತರ ಸ್ನೇಹ ಕೆಎಸ್, ಆರೋಗ್ಯ ನಿರೀಕ್ಷರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಲ್ಪೆಯಲ್ಲಿ: ನಗರಸಭೆಯ ವತಿಯಿಂದ ಮಲ್ಪೆಯ ಸರಕಾರಿ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನಲ್ಲೂ ಡೆಂಗಿ, ಚಿಕನ್‌ಗುನ್ಯ, ಮಲೇರಿಯಾ, ಡಯೇರಿಯಾ, ಫೈಲೇರಿಯಾ ಹಾಗೂ ಇತರ ಸಾಂಕ್ರಮಿಕ ರೋಗಗಳ ಕುರಿತು ಮುಂಜಾಗೃತಾ ಕ್ರಮಗಳ ಮಾಹಿತಿ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಬೇವಿನ ಎಣ್ಣೆ ವಿತರಿಸಲಾಯಿತು. ಪೌರಾಯುಕ್ತ ರಾಯಪ್ಪ, ಪರಿಸರ ಅಭಿಯಂತರ ಸ್ನೇಹ ಕೆಎಸ್, ಶಾಲೆಯ ಮುಖ್ಯೋಪಾದ್ಯಾಯಿನಿ ಸಂಧ್ಯಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ ಸಾಲ್ಯಾನ್, ನಗರಸಭೆಯ ಆರೋಗ್ಯ ನಿರೀಕ್ಷಕ ಮನೋಹರ್, ಸೂಪರ್ ವೈಸರ್‌ಗಳಾದ ಪ್ರಶಾಂತ್, ಶ್ರೀಕಾಂತ್ ಹಾಗೂ ಇತರರು ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.