×
Ad

ಕಲಾವಿದ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯಗೆ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿ

Update: 2024-07-27 20:46 IST

ಜಗನ್ನಾಥ ಆಚಾರ್ಯ

ಉಡುಪಿ: ಉಡುಪಿಯ ಯಕ್ಷಗಾನ ಕೇಂದ್ರವು ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನೀಡುವ 2024ನೇ ಸಾಲಿನ ಯಕ್ಷಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 10,000ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಮುಂದಿನ ನವೆಂಬರ್ 9ರಂದು ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಸಹಯೋಗದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡಗುತಿಟ್ಟು ಯಕ್ಷಗಾನ ಪ್ರಪಂಚದಲ್ಲಿ ಬಣ್ಣದ ವೇಷಧಾರಿಯಾಗಿ ಖ್ಯಾತರಾಗಿರುವ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ, ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಎಳ್ಳಂಪಳ್ಳಿಯಲ್ಲಿ ೧೯೫೬ರಲ್ಲಿ ಜನಿಸಿದರು. 5ನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ, ಪೇತ್ರಿ ಮಾಧವ ನಾಯ್ಕ್‌ರಿಂದ ಪ್ರಾಥಮಿಕ ಯಕ್ಷಗಾನ ನೃತ್ಯಾ ಭ್ಯಾಸ ಮಾಡಿ ಬಾಲಗೋಪಾಲನಾಗಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು.

ನಂತರ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ವಿದ್ಯೆ ಕಲಿತು, ಕೇಂದ್ರದ ಖಾಯಂ ಸದಸ್ಯರಾಗಿ ಗುರು ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲರಾವ್, ಮಹಾಬಲ ಕಾರಂತ, ವೆಂಕಟರಮಣ ಗಾಣಿಗ ಮುಂತಾದವರಿಂದ ತಾಳ, ಹೆಜ್ಜೆಗಾರಿಕೆ ಯಲ್ಲಿ ಪರಿಪೂರ್ಣತೆ ಸಾಧಿಸಿದರು.

ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ ವೃತ್ತಿ ಮೇಳದಲ್ಲಿ ೩೫ ವರ್ಷಗಳ ಕಾಲ ತಿರುಗಾಟ ನಡೆಸಿದ ಆಚಾರ್ಯರು ಕೋಟ ಶಿವರಾಮ ಕಾರಂತರಲ್ಲಿ ಸಾಂಪ್ರದಾಯಿಕ ಶೈಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ, ವೇಷಭೂಷಣ ನಡೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಕಾರಂತರೊಂದಿಗೆ ರಷ್ಯಾ, ದುಬಾ, ಅಬುಧಾಬಿ ಸಹಿತ ವಿವಿಧ ರಾಷ್ಟ್ರಗಳಲ್ಲಿ ತಿರುಗಾಟ ನಡೆಸಿದ್ದರು.

ಶೂರ್ಪನಖಾ, ರಾವಣ, ಹಿಡಿಂಬಾ ಮುಂತಾದ ಬಣ್ಣದ ವೇಷಗಳು ಆಚಾರ್ಯರಿಗೆ ಕೀರ್ತಿ ತಂದಿವೆ. ಇವರ ಕಲಾಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಹಲವಾರು ಸಂಮಾನಗಳು ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News