ಬೈಂದೂರು ಕ್ಷೇತ್ರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ: ಕ್ರಮಕ್ಕೆ ಆಗ್ರಹ
ಬೈಂದೂರು: ಗಾಳಿ ಮಳೆಯಿಂದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಹಾನಿಯಾಗಿದ್ದು, ವಿದ್ಯುತ್ ಕಂಬ, ತಂತಿ ಹಾಗೂ ಟ್ರಾನ್ಸ್ ಫಾರ್ಮರ್‌ಗಳು ಧರೆಗೆ ಉರುಳಿ ಬಿದ್ದಿವೆ. ಇದರಿಂದ ಕ್ಷೇತ್ರದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ವಾಗುತ್ತಿದೆ.
ಬೈಂದೂರು ಕ್ಷೇತ್ರದಲ್ಲಿ ಮೆಸ್ಕಾಂ ಸಿಬ್ಬಂದಿ, ಲೈನ್‌ಮ್ಯಾನ್‌ಗಳ ಕೊರತೆ ಇರುವ ಬಗ್ಗೆ ಮಳೆಗಾಲ ಪೂರ್ವದಲ್ಲಿ ಮಾಹಿತಿ ನೀಡಿದ್ದರೂ ಕೊರತೆ ಸರಿದೂಗಿಸುವ ಪ್ರಯತ್ನ ನಡೆದಿಲ್ಲ. ಮಳೆಗಾಲದಲ್ಲಿ ತುರ್ತು ಸಹಾಯಕ್ಕಾಗಿ ಪರಿಹಾರ ಕಾರ್ಯಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ತಂಡಗಳ ನಿಯೋಜನೆ ಮಾಡಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಮೆಸ್ಕಾಂ ಈ ಕೂಡಲೇ ಎಚ್ಚೆತ್ತುಕೊಂಡು ವಿದ್ಯುತ್ ವ್ಯತ್ಯಯ ತಡೆಯಲು ಹಾಗೂ ತುರ್ತು ಪರಿಹಾರ ಕಾರ್ಯಕ್ಕೆ ಪ್ರತ್ಯೇಕ ತಂಡ ನಿಯೋಜನೆ ಮಾಡಬೇಕು. ವಿದ್ಯುತ್ ಬ್ರೇಕ್ ಡೌನ್ ಸರಿಪಡಿಸುವ ಕಾರ್ಯವೇ ಆಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೂ 15 ದಿನ ಕ್ಷೇತ್ರದ ಜನತೆ ಕತ್ತಲಲ್ಲಿ ಇರಬೇಕಾಗುತ್ತದೆ. ಈ ಕೂಡಲೇ ಜಿಲ್ಲಾಡಳಿತ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.