ಬಿಜೆಪಿ ಸಚಿವರ, ಮುಖಂಡರ ರಾಜೀನಾಮೆ ಯಾವಾಗ ಕೇಳುತ್ತಾರೆ: ರಮೇಶ್ ಕಾಂಚನ್ ಪ್ರಶ್ನೆ
ಉಡುಪಿ, ಸೆ.29: ಮುಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಚುನಾವಣಾ ಬಾಂಡ್ ಹಗರಣದಲ್ಲಿ ಸಿಲುಕಿ ರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಡಿನೋಟಿಫೆ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡುವಂತೆ ಯಾವಾಗ ಒತ್ತಾಯಿಸುತ್ತಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.
ದೇಶದ ಕಾನೂನು ಎಲ್ಲರಿಗೂ ಒಂದೇ ಎನ್ನುವ ಬಿಜೆಪಿಗರು ತಮ್ಮ ನಾಯಕರ ವಿಚಾರದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿ ದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೇಳುವ ತಾವು ಅವರಂತೆಯೇ ತಮ್ಮದೇ ಬಿಜೆಪಿ ನೇತೃತ್ವದ ಸರಕಾರದ ಇಬ್ಬರು ಸಚಿವರು ಹಾಗೂ ಇತರ ನಾಯಕರ ಮೇಲೆ ದಾಖಲಾಗಿ ರುವ ಎಫ್.ಐ.ಆರ್ ಮುಂದಿಟ್ಟುಕೊಂಡು ಅವರುಗಳ ರಾಜೀನಾಮೆ ಕೇಳುವ ದಮ್ಮು ಮತ್ತು ತಾಕತ್ತು ಪ್ರದರ್ಶಿಸಲಿ. ರಾಜೀನಾಮೆ ಕೇಳುವುದು ಬಿಟ್ಟು ಶಾಸಕ ಮತ್ತು ಸಂಸದರು ನಿಮ್ಮ ಕ್ಷೇತ್ರ ವ್ಯಾಪ್ತಿಯ ಸಂತೆಕಟ್ಟೆ, ಇಂದ್ರಾಳಿ, ಮಲ್ಪೆ, ಪರ್ಕಳ ರಸ್ತೆಯ ದುರವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮೊದಲು ಮಾಡಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.