×
Ad

ಭಾರತದ ಶಾಂತಿ, ಸೌಹಾರ್ದ, ಸಹಬಾಳ್ವೆ ಜಗತ್ತಿಗೆ ಮಾದರಿ: ಪುತ್ತಿಗೆ ಶ್ರೀ

Update: 2024-10-26 19:46 IST

ಉಡುಪಿ, ಅ.26: ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಭಾರತೀಯ ವಿದ್ವತ್ ಪರಿಷತ್ ಹಾಗೂ ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿವಿ ಸಹಯೋಗದಲ್ಲಿ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಅಖಿಲ ಭಾರತ ಪ್ರಾಚ್ಯ ವಿದ್ಯಾ 51ನೇ ಸಮ್ಮೇಳನ ಸಮಾರೋಪ ಸಮಾರಂಭವು ಶನಿವಾರ ನಡೆಯಿತು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಭಾರತೀಯ ತತ್ವಜ್ಞಾನದ ಸಹೃದ ಯತೆ, ವೈಶಾಲ್ಯ ಜಗತ್ತಿಗೆ ಅನುಕರಣೀಯ. ಭಾರತದ ವಿಶ್ವ ಗುರುತ್ವ ಮರುಸ್ಥಾಪನೆಯಾಗಬೇಕು. ಏಕ ಧರ್ಮದ ರಾಷ್ಟ್ರ ಗಳಲ್ಲಿ ವೈಚಾರಿಕ ಸ್ವಾತಂತ್ರ್ಯ ಅಲ್ಪವಾಗಿದ್ದರೆ ಹಲವು ಮತ, ಧರ್ಮಗಳ ಭಾರತದಲ್ಲಿ ಶಾಂತಿ, ಸೌಹಾರ್ದ, ಸಹಬಾಳ್ವೆ ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದರು.

ಸಂಸ್ಕೃತ ಭಾರತಿ ಅಧ್ಯಕ್ಷ ದಿನೇಶ್ ಕಾಮತ್ ಮಾತನಾಡಿ, ಭಾರತೀಯ ಪ್ರಾಚ್ಯ ಭಾಷೆಗಳ ಪುನರುಜ್ಜೀವನವಾಗಬೇಕು. ಭಗವದ್ಗೀತೆ ಎಂದೆಂದಿಗೂ ಪ್ರಸ್ತುತ. ಸಾತ್ವಿಕ ಆಹಾರ, ಗುಣಕ್ಕಿರುವ ನೇರ ಸಂಬಂಧದದ ಮಾದರಿಯಲ್ಲಿ ಸಂಶೋಧನೆ ಗಳಾಗಬೇಕು. ವಸಾಹತುಶಾಹಿ ಮನೋಭಾವವನ್ನು ಮೀರಿ ಪ್ರಾಚ್ಯ ಭಾಷಾ ಬೆಳವಣಿಗೆಯಾಗಬೇಕು ಎಂದು ಹೇಳಿದರು.

ಪುತ್ತಿಗೆ ಸ್ವಾಮೀಜಿಯನ್ನು ಭಾರತೀಯ ವಿದ್ವತ್ ಪರಿಷತ್ತಿನ ವತಿಯಿಂದ ಅಭಿನಂದನಾ ಪತ್ರ ಸಹಿತವಾಗಿ ಗೌರವಿಸ ಲಾಯಿತು. ದಿನೇಶ್ ಕಾಮತ್ ಅವರನ್ನು ಸಂಸ್ಕೃತ ಸೇವಾ ವಿಭೂತಿಃ ಬಿರುದು ನೀಡಿ ಗೌರವಿಸಲಾಯಿತು. ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಮಾತನಾಡಿದರು.

ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ 52ನೇ ಸಮ್ಮೇಳನವು 2026ರಲ್ಲಿ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ನಡೆಯ ಲಿದ್ದು ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಅಧ್ಯಕ್ಷತೆ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಘೋಷಿಸಲಾಯಿತು.

ಪರ್ಯಾಯ ಪುತಿತಿಗೆ ಮಠದ ಶ್ರೀಸುಶ್ರೀಂದ್ರತೀರ್ಥರು, ಎಐಒಸಿ ಅಧ್ಯಕ್ಷೆ ಡಾ.ಸರೋಜಾ ಭಾಟೆ, ಪ್ರಧಾನ ಕಾರ್ಯದರ್ಶಿ ಪ್ರೊ.ಕವಿತಾ ಹೊಲೆ, ಭಾರತೀಯ ವಿದ್ವತ್ ಪರಿಷತ್ತಿನ ಅಧ್ಯಕ್ಷ ಡಾ.ಕೊರಡಾ ಸುಬ್ರಹ್ಮಣ್ಯಂ, ಭಾರತೀಯ ವಿದ್ವತ್ ಪರಿಷತ್ ಟ್ರಸ್ಟಿನ ಅಧ್ಯಕ್ಷ ಆಚಾರ್ಯ ವೀರನಾರಾಯಣ ಪಾಂಡುರಂಗಿ, ಐಸಿಪಿಆರ್ ಸದಸ್ಯ ಕಾರ್ಯದರ್ಶಿ ಪ್ರೊ.ಸಚ್ಚಿದಾ ನಂದ ಮಿಶ್ರಾ, ಆರ್.ಜೆ.ಮುರಳೀಕೃಷ್ಣ, ಅರುಣ್ ರಂಜನ್ ಮಿಶ್ರಾ ಉಪಸ್ಥಿತರಿದ್ದರು.

ವಿಶ್ವಸಂಸ್ಥೆ ಹಾಗೂ ಜಾಗತಿಕ ಧರ್ಮ ಸಮ್ಮೇಳನದಲ್ಲಿ ಪುತ್ತಿಗೆ ಸ್ವಾಮೀಜಿ ಮಾಡಿದ ಭಾಷಣ ಸಂಗ್ರಹದ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಸಂಸ್ಕೃತ ವಿವಿಯ ಶಾಸ್ತ್ರ ವಿಭಾಗದ ಡೀನ್ ಪ್ರೊ.ಶಿವಾನಿ ಸಮ್ಮೇಳನದ ವರದಿ ವಾಚಿಸಿದರು. ಬಿ.ಗೋಪಾಲಾಚಾರ್ಯ ಸ್ವಾಗತಿಸಿದರು. ಶ್ರೀನಿವಾಸ ಆಚಾರ್ಯ ಮತ್ತು ಶ್ರುತಿ ಎಚ್. ಕೆ. ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News